ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ತಥಾಗತ ಅವತಾರ ತುಳಸಿ, ಬಾಲ್ಯದಲ್ಲೇ ಅಸಾಧಾರಣ ಪ್ರತಿಭೆ ತೋರಿದರು. ಕೇವಲ 9 ವರ್ಷಕ್ಕೆ ಶಾಲಾ ಶಿಕ್ಷಣ ಮುಗಿಸಿ, 12ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಲ್ಲಿ ಡಾಕ್ಟರೇಟ್ ಪಡೆದು, 21ನೇ ವಯಸ್ಸಿಗೆ ಪಿಎಚ್‌ಡಿ ಪೂರ್ಣಗೊಳಿಸಿದರು.
2010ರಲ್ಲಿ ಐಐಟಿ ಬಾಂಬೆಯಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಆದರೆ, 2011ರಲ್ಲಿ ಆರೋಗ್ಯ ಸಮಸ್ಯೆ ಎದುರಾಯಿತು. ಇದರಿಂದ ಅವರ ವೃತ್ತಿ ಜೀವನಕ್ಕೆ ಹಿನ್ನಡೆಯಾಯಿತು. ದೀರ್ಘಕಾಲದ ಅನಾರೋಗ್ಯದಿಂದ 2019ರಲ್ಲಿ ಐಐಟಿ ಬಾಂಬೆಯಿಂದ ವಜಾಗೊಂಡರು.
ಒಂದು ಕಾಲದಲ್ಲಿ ಏಷ್ಯಾದ ಪ್ರತಿಭಾನ್ವಿತ ಯುವ ಪ್ರತಿಭೆ ಎಂದು ಗುರುತಿಸಿಕೊಂಡಿದ್ದ ತಥಾಗತ, ಇಂದು ಆರ್ಥಿಕ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಕಾನೂನು ಅಧ್ಯಯನದಲ್ಲಿ ತೊಡಗಿದ್ದು, ಸಾಲಿಸಿಟರ್ ಆಗುವ ಕನಸು ಕಾಣುತ್ತಿದ್ದಾರೆ.
ತಥಾಗತ ಅವರ ಜೀವನ, ಪ್ರತಿಭೆ ಇದ್ದರೂ ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲ ಇಲ್ಲದಿದ್ದರೆ ಏನು ಆಗುತ್ತದೆ ಎಂಬುದಕ್ಕೆ ಉದಾಹರಣೆ. ಅವರ ಭವಿಷ್ಯದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿ, ಅವರು ಮತ್ತೊಮ್ಮೆ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಹಾರೈಸೋಣ.