ಜನಪ್ರಿಯ ಬ್ಯುಸಿನೆಸ್ ನಿಯತಕಾಲಿಕೆ ಫೋರ್ಬ್ಸ್ ಭಾರತದ ಅತ್ಯಂತ ಸಿರಿವಂತ ಮಂದಿಯ ಪಟ್ಟಿಯನ್ನು ಏಪ್ರಿಲ್ 4ರಂದು ಬಿಡುಗಡೆ ಮಾಡಿದೆ. ರಿಲಾಯನ್ಸ್ ಸಮೂಹದ ಚೇರ್ಮನ್ ಮುಖೇಶ್ ಅಂಬಾನಿ ಇದೀಗ ಭಾರತ ಮಾತ್ರವಲ್ಲದೇ ಏಷ್ಯಾದಲ್ಲೇ ಸಿರಿವಂತ ಎಂದು ವರದಿಯಲ್ಲಿ ತಿಳಿಸಲಾಗಿದೆ.
2023ರ ಭಾರತದ ಶತಕೋಟ್ಯಾಧಿಪತಿಗಳ ಪಟ್ಟಿಗೆ 16 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ, ಇವರಲ್ಲಿ ಮೂವರು ಮಹಿಳೆಯರಿದ್ದಾರೆ. ದೇಶದಲ್ಲಿರುವ ಒಟ್ಟು ಮಹಿಳಾ ಶತಕೋಟ್ಯಾಧಿಪತಿಗಳ ಸಂಖ್ಯೆ ಐದು – ಸಾವಿತ್ರಿ ಜಿಂದಾಲ್, ರೋಹಿಕಾ ಸೈರಸ್ ಮಿಸ್ತ್ರಿ, ರೇಖಾ ಝುಂಝುನ್‌ವಾಲಾ, ವಿನೋದ್ ರಾಯ್ ಗುಪ್ತಾ ಹಾಗೂ ಲೀನಾ ತಿವಾರಿ.
ಸಾಮಾನ್ಯವಾಗಿ ಮಾಧ್ಯಮಗಳ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದ ಲೀನಾ ಗಾಂಧಿ ತಿವಾರಿ ಫಾರ್ಮಾ ಉದ್ಯಮಿಯಾಗಿದ್ದಾರೆ. ಯುಎಸ್‌ವಿ ಇಂಡಿಯಾ ಹೆಸರಿನ ಖಾಸಗಿ ಸಂಸ್ಥೆಯ ಚೇರ್ಮನ್ ಆಗಿದ್ದಾರೆ ಲೀನಾ. ಇವರ ಸದ್ಯದ ಆಸ್ತಿಯ ಮೌಲ್ಯ $3.7 ಶತಕೋಟಿ (30,000 ಕೋಟಿ ರೂ.ಗಳು). ಬಯೋಕಾನ್‌ನ ಕಿರಣ್ ಮುಝುಂದಾರ್ ಶಾ, ನೈಕಾದ ಫಾಲ್ಗುಣಿ ನಾಯರ್ ಹಾಗೂ ಜ಼ೋಹೋ ಕಾರ್ಪ್‌ನ ರಾಧಾ ವೆಂಬುಗಿಂತ ಲೀನಾ ಶತಕೋಟ್ಯಾಧಿಪತಿ ಮಹಿಳೆಯರ ಪಟ್ಟಿಯಲ್ಲಿ ಮುಂದಿದ್ದಾರೆ.
ಹೃದ್ರೋಗ ಹಾಗೂ ಮಧುಮೇಹದ ಔಷಧಗಳ ಕ್ಷೇತ್ರದಲ್ಲಿ ಯುಎಸ್‌ವಿ ಫಾರ್ಮಾ ದೇಶದ ಅಗ್ರ ಐದು ಕಂಪನಿಗಳಲ್ಲಿ ಒಂದಾಗಿದೆ. ಇದರೊಂದಿಗೆ ಸಕ್ರಿಯ ಫಾರ್ಮಕ್ಯೂಟಿಕಲ್ ವಸ್ತುಗಳು (ಎಪಿಐ), ಇಂಜೆಕ್ಷನ್‌ಗಳು ಹಾಗೂ ಬಯೋಸಿಮಿಲರ್ ಮದ್ದುಗಳನ್ನು ಸಹ ಯುಎಸ್‌ವಿ ಉತ್ಪಾದಿಸುತ್ತದೆ. ಯುಎಸ್‌ವಿಯ ಗ್ಲೈಕೋಮೆಟ್ ದೇಶದ ಅಗ್ರ ಮೂರು ಡಯಾಬೆಟಿಕ್ ಮದ್ದುಗಳಲ್ಲಿ ಒಂದಾಗಿದೆ.
ಪ್ರಯಾಣ ಪ್ರಿಯೆಯಾಗಿರುವ ತಿವಾರಿ, ಪುಸ್ತಕ ಓದುವುದನ್ನು ಇಷ್ಟ ಪಡುತ್ತಾರೆ. ಮುಂಬೈ ವಿವಿಯಿಂದ ಬಿಕಾಂ ಪದವಿ ಪೂರೈಸಿರುವ ಲೀನಾ, ಬೋಸ್ಟನ್ ವಿವಿಯಲ್ಲಿ ಎಂಬಿಎ ಮಾಡಿದ್ದಾರೆ.
ಯುಎಸ್‌ವಿಯ ಎಂಡಿ ಪ್ರಶಾಂತ್ ತಿವಾರಿರನ್ನು ವಿವಾಹವಾಗಿರುವ ಲೀನಾಗೆ ಒಬ್ಬ ಮಗಳಿದ್ದಾರೆ. ಪ್ರಶಾಂತ್ ಐಐಟಿ ಬಾಂಬೆ ಹಾಗೂ ಅಮೆರಿಕದ ಕಾರ್ನೆಲ್ ವಿವಿಯಲ್ಲಿ ಇಂಜಿನಿಯರಿಂಗ್ ಉನ್ನತ ಪದವಿಗಳನ್ನು ಪಡೆದಿದ್ದಾರೆ.