ಕಳೆದ ತಿಂಗಳು ಸೇತುವೆ ಕುಸಿತದಿಂದ 135 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ಗುರ್ಜರಾತ್ ನ ಮೊರ್ಬಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಜಯಗಳಿಸಿದ್ದಾರೆ.
ಕೊನೆಯ ಸುತ್ತಿನ ಮತ ಎಣಿಕೆಯ ಪ್ರಕಾರ, ಅಮೃತೀಯ ಅವರು ಕಾಂಗ್ರೆಸ್ ಪ್ರತಿಸ್ಪರ್ಧಿ ಜಯಂತಿಲಾಲ್ ಪಟೇಲ್ ಅವರಿಗಿಂತ 16,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅಜೇಯ ಮುನ್ನಡೆ ಸಾಧಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪಂಕಜ್ ರಂಸಾರಿಯಾ 6,000 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಸೌರಾಷ್ಟ್ರ ಪ್ರದೇಶದ ಮೊರ್ಬಿ ಸ್ಥಾನಕ್ಕೆ ಒಂಬತ್ತನೇ ಸುತ್ತಿನ ಮತ ಎಣಿಕೆ ಮುಗಿದ ನಂತರ ಅಮೃತಿಯಾ 37,500 ಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಪಟೇಲ್ 20,000 ಕ್ಕೂ ಹೆಚ್ಚು ಮತಗಳನ್ನು ಪಡೆದರು.
ಮೋರ್ಬಿ ಸೇತುವೆ ಕುಸಿತದ ಘಟನೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಆಪತ್ಬಾಂಧವನಾಗಿದ್ದರು. ಅವರು ಜನರನ್ನು ರಕ್ಷಿಸಲು ನದಿಗೆ ಹಾರಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕಾಂತಿಲಾಲ್ ಅವರ ಕಾರ್ಯದಿಂದ ಅವರಿಗೆ ರಾಷ್ಟ್ರವ್ಯಾಪಿ ಪ್ರಶಂಸೆ ಮತ್ತು “ಮೊರ್ಬಿ ಹೀರೋ” ಎಂಬ ಗೌರವವನ್ನು ತಂದುಕೊಟ್ಟಿತ್ತು.
ಮೊರ್ಬಿ ಸೇತುವೆ ಕುಸಿತದ ದುರಂತದ ನಂತರ ಆಡಳಿತಾರೂಢ ಬಿಜೆಪಿ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸರ್ಕಾರದ ಮೇಲೆ ಪ್ರತಿಪಕ್ಷಗಳು ದಾಳಿ ಮಾಡಲು ಪ್ರಯತ್ನಿಸಿದರೂ ಕೇಸರಿ ಪಕ್ಷವು ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸೇತುವೆ ಕುಸಿತದ ಘಟನೆಯ ನಂತರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿತ್ತು. ಪಾಟಿದಾರ್ ಪ್ರಾಬಲ್ಯದ ಮೊರ್ಬಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಬ್ರಿಜೇಶ್ ಮಿರ್ಜಾ ಅವರ ಬದಲಿಗೆ ಮಾಜಿ ಶಾಸಕ ಕಾಂತಿಲಾಲ್ ಅವರನ್ನು ಪಕ್ಷ ಕಣಕ್ಕಿಳಿಸಿತ್ತು.
ಇದೇ ವೇಳೆ, ಕಾಂಗ್ರೆಸ್ ಜಯಂತಿಲಾಲ್ ಜೆರಾಜ್ ಭಾಯ್ ಪಟೇಲ್ ಅವರಿಗೆ ಟಿಕೆಟ್ ನೀಡಿದ್ದು, ತ್ರಿಕೋನ ಸ್ಪರ್ಧೆಗೆ ಕಾರಣವಾದ ಆಮ್ ಆದ್ಮಿ ಪಕ್ಷ ಪಂಕಜ್ ರಂಸಾರಿಯಾ ಅವರನ್ನು ಕಣಕ್ಕಿಳಿಸಿತ್ತು.
ಕಾಂತಿಲಾಲ್ ಅಮೃತಿಯಾ ಈ ಹಿಂದೆ ಐದು ಬಾರಿ ಮೊರ್ಬಿಯಿಂದ ಗೆದ್ದಿದ್ದರೆ, ಜಯಂತಿಲಾಲ್ ಪಟೇಲ್ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪ್ರತಿಸ್ಪರ್ಧಿಗಳಿಗೆ ಐದು ಬಾರಿ ಸೋತಿದ್ದಾರೆ.
ಅಕ್ಟೋಬರ್ 30 ರಂದು ನಗರದಲ್ಲಿ ಬ್ರಿಟಿಷ್ ಕಾಲದ ತೂಗು ಸೇತುವೆಯೊಂದು ಮಚ್ಚು ನದಿಗೆ ಕುಸಿದು 135 ಜನ ಸಾವನ್ನಪ್ಪಿದ್ದರು. ಈ ದುರ್ಘಟನೆಯು ವಿಧಾನಸಭೆ ಚುನಾವಣೆಯ ಲೆಕ್ಕಾಚಾರ ಬದಲಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ಲೆಕ್ಕಾಚಾರ ತಪ್ಪಿಲ್ಲ. ಬಿಜೆಪಿ ಟಿಕೆಟ್ ಪಡೆದುಕೊಂಡ ಮಾಜಿ ಶಾಸಕ ಕಾಂತಿಲಾಲ್ ಮೊರ್ಬಿ ಹೀರೋ ಭರ್ಜರಿ ಜಯಗಳಿಸಿದ್ದಾರೆ.