ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು 3800 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದರೂ ದೇಶಾದ್ಯಂತ ಅವರನ್ನು ವಿನಮ್ರ ವ್ಯಕ್ತಿ ಎಂದು ಶ್ಲಾಘಿಸಲಾಗುತ್ತೆ. ಸಾಮಾಜಿಕ ಸೇವೆ ಮಾಡುವ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ . ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಅವರ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಅವರು ಸಾರ್ವಜನಿಕರ ಕಣ್ಣಿಂದ ದೂರವೇ ಇರುತ್ತಾರೆ.
ಜಿಮ್ಮಿ ಟಾಟಾ ಅವರು ನೇವಲ್ ಟಾಟಾ ಮತ್ತು ಸೂನಿ ಕಮಿಶರಿಯಟ್ ಅವರ ಎರಡನೇ ಮಗ. ಕೊಲಾಬಾದ ಹ್ಯಾಂಪ್ಟನ್ ಕೋರ್ಟ್‌ನ ಆರನೇ ಮಹಡಿಯಲ್ಲಿ 2 ಬಿಹೆಚ್ ಕೆಯ ಅಪಾರ್ಟ್‌ಮೆಂಟ್ ನಲ್ಲಿ ವಾಸ ಮಾಡುತ್ತಾರೆ. ಅವರು ಎಂದಿಗೂ ಮೊಬೈಲ್ ಬಳಸುವುದಿಲ್ಲ. ಹೆಚ್ಚು ಪ್ರಯಾಣಿಸುವುದಿಲ್ಲ ಮತ್ತು ಅಂತರರಾಷ್ಟ್ರೀಯ ಘಟನೆಗಳ ಬಗ್ಗೆ ಜ್ಞಾನ ಪಡೆಯಲು ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದಲು ಆದ್ಯತೆ ನೀಡುತ್ತಾರೆ. ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಳ್ಳದೇ ತಮ್ಮ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿವೆ.
ಜಿಮ್ಮಿ ಟಾಟಾ ಅವರು ಹಲವಾರು ಟಾಟಾ ಗ್ರೂಪ್ ವ್ಯವಹಾರಗಳಲ್ಲಿ ಗಮನಾರ್ಹ ಷೇರುಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ. ಟಾಟಾ ಮೋಟಾರ್ಸ್, ಇಂಡಿಯನ್ ಹೋಟೆಲ್‌ಗಳು, ಟಿಸಿಎಸ್, ಟಾಟಾ ಕೆಮಿಕಲ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ನಲ್ಲಿ ಷೇರು ಹೊಂದಿದ್ದಾರೆ.
ಬಿಲಿಯನೇರ್ ಮತ್ತು ಲೋಕೋಪಕಾರಿ ಹರ್ಷ್ ಗೋಯೆಂಕಾ ಅವರು 2022 ರಲ್ಲಿ ಹಾಕಿರುವ ಪೋಸ್ಟ್ ವೊಂದರಲ್ಲಿ ಜಿಮ್ಮಿ ಟಾಟಾ ಅವರು ಸಾಧಾರಣ ಅಪಾರ್ಟ್ಮೆಂಟ್ ಹೊಂದಿದ್ದು ಕುಟುಂಬದ ಕಂಪನಿಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಜಿಮ್ಮಿ ಟಾಟಾ ಅವರು ಹರ್ಷ್ ಗೋಯೆಂಕಾ ಅವರಿಗಿಂತ ಉತ್ತಮ ಸ್ಕ್ವಾಷ್ ಆಟಗಾರರಾಗಿದ್ದು ಸತತವಾಗಿ ಹರ್ಷ್ ಗೋಯೆಂಕಾ ಅವರನ್ನು ಸೋಲಿಸುತ್ತಾರೆ ಎಂದು ಹೇಳಿದ್ದಾರೆ.
ಜಿಮ್ಮಿ ಟಾಟಾ ಅವರು ಸರ್ ರತನ್ ಟಾಟಾ ಟ್ರಸ್ಟ್ ನ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ನೇವಲ್ ಟಾಟಾ ಅವರು 1989 ರಲ್ಲಿ ನಿಧನರಾದ ನಂತರ ಅವರ ಇಚ್ಛೆಗೆ ಅನುಗುಣವಾಗಿ ಈ ಹುದ್ದೆಯನ್ನು ಪಡೆದರು.