
ಹಾಗಿದ್ದೂ ಕೂಡ ಶುಕ್ರವಾರದ ವಿಶ್ವಸಂಸ್ಥೆ ಪ್ರಧಾನ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, 370ನೇ ವಿಧಿ ರದ್ದತಿಗೆ ವಿರೋಧ ಮತ್ತು ಕಾಶ್ಮೀರಿ ಜನರ ಬಗ್ಗೆ ಪೊಳ್ಳು ಕಾಳಜಿಯ ಮಾತುಗಳನ್ನು ಆಡಿದ್ದಾರೆ. ಕೂಡಲೇ ಪ್ರತಿಕ್ರಿಯೆ ಹಕ್ಕು ಮೂಲಕ ಖಡಕ್ ಉತ್ತರ ನೀಡಿ, ಪರೋಕ್ಷವಾಗಿ ಖಾನ್‌ಗೆ ಕಪಾಳಮೋಕ್ಷ ಮಾಡಿದ್ದು ಭಾರತದ ಯುವ ಐಎಫ್‌ಎಸ್ ಅಧಿಕಾರಿ ಸ್ನೇಹಾ ದುಬೆ.
ಸದ್ಯ ಇವರು ಭಾರತದ ’ನಾರಿ ಶಕ್ತಿಯ’ ಪ್ರತೀಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸುತ್ತಿದ್ದಾರೆ. ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಖಾಲಿ ಮಾಡಿರಿ. ಒಸಾಮಾ ಬಿನ್ ಲಾಡೆನ್ ಸಾಯುವ ಮುನ್ನ ಎಲ್ಲಿ ಸಿಕ್ಕಿದ್ದ ಎಂದು ಇಡೀ ಜಗತ್ತಿಗೆ ಗೊತ್ತಿದೆ. ನಿಮ್ಮ ಉಪದೇಶ ನಮಗೆ ಬೇಕಿಲ್ಲ ಎಂದು ಸ್ನೇಹಾ ಆಡಿದ ಖಡಕ್ ಮಾತುಗಳಿಗೆ ಇಮ್ರಾನ್ ಖಾನ್ ಪೇಚಿಗೆ ಸಿಲುಕಿದ್ದಾರೆ.
ಅಂದಹಾಗೆ, ಈ ಯುವ ಅಧಿಕಾರಿ ಸ್ನೇಹಾ ಅವರು ತಮ್ಮ 12ನೇ ವಯಸ್ಸಿನಲ್ಲೇ ಐಎಫ್‌ಎಸ್ ಕನಸು ಕಂಡು ಅದನ್ನು ಸಾಕಾರಗಳಿಸಿಕೊಂಡವರು. ತಂದೆ ಸಾಫ್ಟ್‌ವೇರ್ ಉದ್ಯೋಗಿ, ತಾಯಿ ಶಾಲಾ ಶಿಕ್ಷಕಿಯಾಗಿದ್ದಾರೆ. ಶಾಲಾ ಶಿಕ್ಷಣವನ್ನು ಗೋವಾದಲ್ಲಿ ಮುಗಿಸಿದ ಅವರು, ಪುಣೆಯಲ್ಲಿ ಹಾಗೂ ದಿಲ್ಲಿಯ ಜೆಎನ್‌ಯುನಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.
2013ರ ಡಿಸೆಂಬರ್‌ನಿಂದ 2014ರ ಆಗಸ್ಟ್‌ವರೆಗೆ ಲ್ಯಾಟಿನ್ ಅಮೆರಿಕ ಮತ್ತು ಕೆರ್ರಿಬಿಯನ್ ವಿಭಾಗಕ್ಕೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಂತರ ಅವರು ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನ ರಾಯಭಾರ ಕಚೇರಿಯಲ್ಲಿದ್ದರು. ಸದ್ಯ ವಿಶ್ವಸಂಸ್ಥೆಯ ಪ್ರತಿನಿಧಿಗಳ ಪೈಕಿ ಕಾರ್ಯದರ್ಶಿ ಸ್ಥಾನದಲ್ಲಿದ್ದಾರೆ.