ವೃತ್ತಿಜೀವನದುದ್ದಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ತಮ್ಮ ಬದ್ಧತೆಯ ಮೂಲಕ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಮನೆ ಮಾತಾಗಿದ್ದಾರೆ.
33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ 57 ಪೋಸ್ಟಿಂಗ್ ನಿಭಾಯಿಸಿರುವ ಅಶೋಕ್ ಖೇಮ್ಕಾ ಅವರನ್ನು ಈಗ ಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆಗಿ ನೇಮಿಸಲಾಗಿದೆ. ಈ ನೇಮಕಾತಿಯು ಅವರ ನಿವೃತ್ತಿಯಾಗುವ ಏಪ್ರಿಲ್ 30, 2025 ರ ವರೆಗೆ ಇರುತ್ತದೆ.
1991-ಬ್ಯಾಚ್ ಅಧಿಕಾರಿ, ಈ ಹಿಂದೆ ಪ್ರಿಂಟಿಂಗ್ ಮತ್ತು ಸ್ಟೇಷನರಿ ಇಲಾಖೆಯಲ್ಲಿ ಎಸಿಎಸ್ ಆಗಿ ಸೇವೆ ಸಲ್ಲಿಸಿದ್ದರು, 1994-ಬ್ಯಾಚ್ ಐಪಿಎಸ್ ಅಧಿಕಾರಿ ನವದೀಪ್ ವ್ರಿಕ್ ಅವರನ್ನು ಬದಲಿಸಲಾಗಿದ್ದು, ಸುಮಾರು ಒಂದು ದಶಕದ ನಂತರ ಸಾರಿಗೆ ಇಲಾಖೆಗೆ ಖೇಮ್ಕಾ ಮರಳಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಅವಧಿಯಲ್ಲಿ ಖೇಮ್ಕಾ, ಸಾರಿಗೆ ಆಯುಕ್ತರಾಗಿ ಕೇವಲ ನಾಲ್ಕು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ಸಮಯದಲ್ಲಿ, ಅವರು ಭಾರಿ ಗಾತ್ರದ ಟ್ರಕ್‌ಗಳು ಮತ್ತು ಟ್ರೇಲರ್‌ಗಳಿಗೆ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವುದರ ವಿರುದ್ಧ ಕಠಿಣ ನಿರ್ಧಾರ ಕೈಗೊಂಡಿದ್ದು, ಇದು ಜನವರಿಯಲ್ಲಿ ಟ್ರಕ್ ಮಾಲೀಕರ ಮುಷ್ಕರಕ್ಕೆ ಕಾರಣವಾಗಿತ್ತು. ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಅನುಸರಿಸಲು ಸರ್ಕಾರ ಒಂದು ವರ್ಷದ ಗಡುವನ್ನು ನೀಡಿದ ಬಳಿಕ ಮುಷ್ಕರ ಕೊನೆಗೊಂಡಿತ್ತು.
ತಮ್ಮ ವೃತ್ತಿಜೀವನದುದ್ದಕ್ಕೂ, ಖೇಮ್ಕಾ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ವರ್ಷ, ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು “ಭ್ರಷ್ಟಾಚಾರವನ್ನು ಬೇರುಸಹಿತ” ಮಾಡಲು ವಿಜಿಲೆನ್ಸ್ ಬ್ಯೂರೋವನ್ನು ಮುನ್ನಡೆಸುವಂತೆ ಪ್ರಸ್ತಾಪಿಸಿದ್ದರು.
ಅವರು ಈಗ ಮತ್ತೆ ಪ್ರಮುಖ ಇಲಾಖೆಗೆ ಮರಳುವುದರೊಂದಿಗೆ, ಸಾರಿಗೆ ವಲಯದಲ್ಲಿ ಪಾರದರ್ಶಕತೆ ಮತ್ತು ಸುಧಾರಣೆಯನ್ನು ತರಲು ಖೇಮ್ಕಾ ಅವರ ಪ್ರಯತ್ನಗಳನ್ನು ಮುಂದುವರೆಸುತ್ತಾರೆ ಎಂಬ ನಿರೀಕ್ಷೆಗಳು ಹೆಚ್ಚಿವೆ.