ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಕನಸನ್ನು ದೇಶದ ಕೋಟ್ಯಂತರ ಯುವಕರು ಕಾಣುತ್ತಾರೆ. ಆದರೆ ಈ ವಿಚಾರವಾಗಿ ದಣಿವರಿಯದ ಅಧ್ಯಯನದ ಜೊತೆಗೆ ಒಂದು ಮಟ್ಟಿಗೆ ಅದೃಷ್ಟವೂ ಬೇಕಾಗುತ್ತದೆ.
ಈ ಪರೀಕ್ಷೆಗಳನ್ನು ಪಾಸಾಗಿ ಐಎಎಸ್/ಐಪಿಎಸ್ ಆಗಿರುವ ಅನೇಕ ಮಂದಿಗೆ ಸಮಾಜದಲ್ಲಿ ಭಾರೀ ಗೌರವವಿದ್ದು, ಸೆಲೆಬ್ರಿಟಿ ಸ್ಥಾನಮಾನ ದೊರಕುತ್ತದೆ. ದಿನಸಿ ಮಾರಾಟಗಾರನ ಪುತ್ರಿಯಾಗಿ ಬೆಳೆದ ಶ್ವೇತಾ ಅಗರ್ವಾಲ್ 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲೇ 19ನೇ ರ‍್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿದ್ದಾರೆ.
ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಶ್ವೇತಾ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಮೂರು ಬಾರಿ ತೇರ್ಗಡೆಯಾಗಿದ್ದಾರೆ. ಮೊದಲ ಬಾರಿ 497ನೇ ರ‍್ಯಾಂಕ್ ಪಡೆದ ಶ್ವೇತಾಗೆ ಐಆರ್‌ಎಸ್ ಹುದ್ದೆ ಒಲಿದು ಬಂದರೂ ಐಎಎಸ್ ಆಗಲೇಬೇಕೆಂಬ ಹಠದಲ್ಲಿ ಸತತ ಪ್ರಯತ್ನ ಮುಂದುವರೆಸಿದರು.
ಮೂರನೇ ಯತ್ನದಲ್ಲಿ 141ನೇ ರ‍್ಯಾಂಕ್ ಬಂದರೂ ಸಹ ಆಗಲೂ ಮರು ಪರೀಕ್ಷೆ ಬಯಸಿದ ಶ್ವೇತಾ ಕೊನೆಗೂ ನಾಲ್ಕನೇ ಯತ್ನದಲ್ಲಿ 19ನೇ ರ‍್ಯಾಂಕ್ ಪಡೆದು ಐಎಎಸ್ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ಶ್ವೇತಾ ಕುಟುಂಬಸ್ಥರಿಗೆ ಆಕೆ ಜನಿಸಿದಾಗ ಗಂಡು ಮಗು ಹುಟ್ಟಲಿಲ್ಲವೆಂಬ ಬೇಸರವಿತ್ತಂತೆ. ಆದರೆ ಮಗಳಿಗೇ ಚೆನ್ನಾಗಿ ಓದಿಸುವ ನಿರ್ಧಾರಕ್ಕೆ ಬಂದ ಕುಟುಂಬಸ್ಥರು ಇಂದು ತಮ್ಮ ಮಗಳು ಉನ್ನತ ಸ್ಥಾನಕ್ಕೇರಿರುವುದನ್ನು ಕಂಡು ಬಹಳ ಸಂತಸದಿಂದಿದೆ.