ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಗೆಲ್ಲಲು ಸಂಧಾನ ಸೂತ್ರದ ಮೊರೆ ಹೋದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಲಿದ್ದಾರೆ.
ಜೆಪಿ ನಗರದ ನಿವಾಸಕ್ಕೆ ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಿ ಸುಮಲತಾ ಅಂಬರೀಶ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಮಾಜಿ ಸಚಿವ ನಾರಾಯಣಗೌಡರ ಮನವೊಲಿಸಿರುವ ಕುಮಾರಸ್ವಾಮಿ ಇಂದು ಸುಮಲತಾ ಅಂಬರೀಶ್ ಸೇರಿದಂತೆ ಎಲ್ಲರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಸುಮಲತಾ ಅವರನ್ನು ವಿಶ್ವಾಸಕ್ಕೆ ಪಡೆಯಲು ಇಂದು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಕುಮಾರಸ್ವಾಮಿ ಅವರ ಭೇಟಿಗೆ ಆಕ್ಷೇಪವಿಲ್ಲ. ಇದು ಅಂಬರೀಶ್ ಅವರ ಮನೆ ಎಂದು ಇತ್ತೀಚೆಗಷ್ಟೇ ಸಂಸದೆ ಸುಮಲತಾ ಹೇಳಿದ್ದರು.