ಜೀವನದ ಗುರಿಯನ್ನು ತಲುಪಲು ಒಮ್ಮೆ ದೃಢವಾಗಿ ನಿರ್ಧರಿಸಿದರೆ ಯಾವುದೇ ಅಡೆತಡೆಗಳು ಎದುರಾದರೂ ಗುರಿ ಮುಟ್ಟಲು ಅಡ್ಡಿಯಾಗುವುದಿಲ್ಲ. ಅದೇ ರೀತಿ ಜೀವನದಲ್ಲಿ ಸಂಕಷ್ಟದ ನಡುವೆಯೂ ಸಾಧನೆ ತೋರಿದ ತೆಲಂಗಾಣ ಮೂಲದ ಡೋಂಗ್ರೆ ರೇವಯ್ಯ ಅವರು ಯುಪಿಎಸ್‌ಸಿಯಲ್ಲಿ 410ನೇ ರ್ಯಾಂ ಕ್‌ನೊಂದಿಗೆ ತೇರ್ಗಡೆಯಾಗಿ ಗಮನ ಸೆಳೆದಿದ್ದಾರೆ. ಕಡು ಬಡತನ ಮತ್ತು ಕಷ್ಟಗಳ ನಡುವೆಯೂ ಅವರು ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಈ ಐಎಎಸ್ ಅಧಿಕಾರಿಯ ಯಶೋಗಾಥೆ ಖಂಡಿತವಾಗಿಯೂ ನಿಮ್ಮ ಹೃದಯ ಮುಟ್ಟುತ್ತದೆ.
ಡೋಂಗ್ರೆ ರೇವಯ್ಯ ಅವರು ಬಡತನದಿಂದ ಬಳಲುತ್ತಿರುವ ಕುಟುಂಬದಿಂದ ಬಂದವರು. ಅವರ ತಂದೆ ತೀರಿಕೊಂಡ ನಂತರ ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೆಲಸ ಮಾಡಲು ಪ್ರಾರಂಭಿಸಿದರು. ಆಕೆಯ ಅಲ್ಪ ಆದಾಯದಿಂದ ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಸಣ್ಣ ಮೊತ್ತದ ಆದಾಯವಿದ್ದರೂ ಅವರು ಡೋಂಗ್ರೆ ರೇವಯ್ಯ ಸೇರಿದಂತೆ ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸುತ್ತಾರೆ. ಬಳಿಕ ರೇವಯ್ಯ ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಐಐಟಿ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾದರು, ಐಐಟಿ ಮದ್ರಾಸ್‌ಗೆ ಪ್ರವೇಶ ಪಡೆದರು.
ಐಐಟಿ ಮದ್ರಾಸ್‌ಗೆ ಪ್ರವೇಶ ಪಡೆದ ನಂತರ ಡೋಂಗ್ರೆ ಅವರ ಹಣಕಾಸಿನ ಕೊರತೆ ಮತ್ತು ಆರ್ಥಿಕ ಅಸ್ಥಿರತೆಯ ಕಾರಣ ಮದ್ರಾಸ್ ಗೆ ಹೋಗುವ ಯಾವುದೇ ಭರವಸೆ ಇರಲಿಲ್ಲ. ಆದಾಗ್ಯೂ ಅವರು ಜಿಲ್ಲಾಡಳಿತದ ಸಹಾಯವನ್ನು ಪಡೆದು ಅಂತಿಮವಾಗಿ ಐಐಟಿಗೆ ಹೋಗುವ ತಮ್ಮ ಕನಸನ್ನು ನನಸಾಗಿಸಿದರು.
ರೇವಯ್ಯ ತೆಲಂಗಾಣದ ಸಣ್ಣ ಪಟ್ಟಣದಿಂದ ಬಂದವರು. ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ, ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ ಹೈದರಾಬಾದಿನಲ್ಲಿ ಹೆಚ್ಚಿನ ಸಂಬಳದ ಕೆಲಸ ಪಡೆದರು. ಇದೆಲ್ಲದರ ನಡುವೆ ಅವರು IAS ಅಧಿಕಾರಿಯಾಗಲು ಬಯಸಿದ್ದರು. ಅಂತಿಮವಾಗಿ 2022 ರಲ್ಲಿ ಅವರು UPSC ಯಲ್ಲಿ ತೇರ್ಗಡೆಯಾಗಿ 410 ರ್ಯಾಂಕ್ ಪಡೆದರು.
ಸದ್ಯ ರೇವಯ್ಯ ಅವರು ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲಿಯೇ ಸರ್ಕಾರಿ ಅಧಿಕಾರಿಯಾಗಿ ನೇಮಕಗೊಳ್ಳಲಿದ್ದು, ಅವರ ಇಡೀ ಕುಟುಂಬ ಹಾಗೂ ದಲಿತ ಸಮುದಾಯ ಹೆಮ್ಮೆ ಪಡುವಂತಾಗಿದೆ.
ರೇವಯ್ಯ ಅವರು ಹೈದರಾಬಾದ್‌ನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು ಎಂಬುದು ಕುತೂಹಲಕಾರಿ ಸಂಗತಿ. ಬಳಿಕ ಖಾಸಗಿ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್ ಸಿ ಪರೀಕ್ಷೆಯತ್ತ ಗಮನ ಹರಿಸಿದರು.