ಹಿಂದೂಗಳು ಸೇರಿದಂತೆ ತನ್ನಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಂಡಿರುವ ವಿಚಾರದಲ್ಲಿ ಜಗದೆಲ್ಲೆಡೆ ಕುಖ್ಯಾತಿಗೆ ಪಾತ್ರವಾಗಿದೆ ಪಾಕಿಸ್ತಾನ. ಇದರ ನಡುವೆಯೇ ತಮ್ಮೆದುರು ನಿಂತ ಅನೇಕ ಸವಾಲುಗಳನ್ನು ಮೆಟ್ಟಿ ಮುಂದೆ ಬಂದಿರುವ ಕೆಲವೇ ಕೆಲವು ಪಾಕಿಸ್ತಾನೀ ಹಿಂದುಗಳ ಬಗ್ಗೆ ಆಗಾಗ ಕೇಳಿರುತ್ತೇವೆ.
ಪಾಕಿಸ್ತಾನದ ಅತ್ಯಂತ ಸಿರಿವಂತ ಹಿಂದೂ ದೀಪಕ್ ಪರ್ವಾನಿ ಇವರಲ್ಲೊಬ್ಬರು.
ಪಾಕಿಸ್ತಾನದ ಮೀರ್ಪುರ್ ಖಾಸ್ನಲ್ಲಿ 1973ರಲ್ಲಿ ಜನಿಸಿದ ದೀಪಕ್ ಪರ್ವಾನಿ ಫ್ಯಾಶನ್ ಡಿಸೈನಿಂಗ್ ಮತ್ತು ನಟನೆಯಲ್ಲಿ ಖ್ಯಾತಿ ಪಡೆದಿದ್ದಾರೆ. ಪಾಕಿಸ್ತಾನದಲ್ಲಿರುವ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದ್ದಾರೆ ದೀಪಕ್. ಪಾಕಿಸ್ತಾನದ ಫ್ಯಾಶನ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ದೀಪಕ್ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2022ರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ದೀಪಕ್ರ ಆಸ್ತಿಯ ಮೌಲ್ಯ 71 ಕೋಟಿ ರುಪಾಯಿಗಳಷ್ಟಿದೆ.
ಪಾಕಿಸ್ತಾನ ಜನಪ್ರಿಯ ಟಿವಿ ಧಾರಾವಾಹಿಗಳಾದ ’ಮೇರೆ ಪಾಸ್ ಪಾಸ್’ (ಹಮ್ ಟಿವಿ) ಮತ್ತು ಕದೂರತ್ (ಹಮ್ ಟಿವಿ)ಗಳಲ್ಲಿ ನಟಿಸಿದ್ದಾರೆ ದೀಪಕ್. ಇದೇ ವೇಳೆ ಪಂಜಾಬ್ ನಹಿ ಜಾವೂಂಗಿ ಎಂಬ ರೊಮ್ಯಾಂಟಿಂಕ್ ಕಾಮಿಡಿ ಚಿತ್ರದಲ್ಲೂ ದೀಪಕ್ ನಟಿಸಿದ್ದಾರೆ.
ದೀಪಕ್ರ ಅಣ್ಣ ನವೀನ್ ಪರ್ವಾನಿ ಸ್ನೂಕಲ್ ಆಟಗಾರರಾಗಿದ್ದಾರೆ. 2006ರಲ್ಲಿ ಕತಾರ್ನ ದೋಹಾದಲ್ಲಿ ಆಯೋಜಿಸಿದ್ದ ಏಷ್ಯನ್ ಗೇಮ್ಸ್ನಲ್ಲಿ ನವೀನ್ ಪರ್ವಾನಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು.