ತ್ರಿಪುರಾದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡೆಬೊಲಿನಾ ರಾಯ್ ಸಾಮಾಜಿಕ ಜಾಲಾತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಅಗರ್ತಲಾದ ಟಿಐಟಿ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರೈಸಿದ ಬಳಿಕ, 2017ರಲ್ಲಿ ಕೋಲ್ಕತ್ತಾದ ಗಾರ್ಗಿ ಮೆಮೋರಿಯಲ್ ಸಂಸ್ಥೆಯಲ್ಲಿ ಎಂಜಿನಯರಿಂಗ್ ಪದವೀಧರೆಯಾದ ಡೆಬೊಲಿನಾ ತಮ್ಮ ಲೋಕೋ ಪೈಲಟ್ ತರಬೇತಿ ಪೂರೈಸಿದ್ದು, ಇದೀಗ ಖರಗ್ಪುರ ವಿಭಾಗದಲ್ಲಿ ಸಹಾಯಕ ಲೋಕೋ ಪೈಲಟ್ ಆಗಿ ಸೇವೆಗೆ ನೇಮಕಗೊಂಡಿದ್ದಾರೆ.
“ಸಾಂಪ್ರದಾಯಿಕವಾಗಿ ರೈಲ್ವೇ ಲೋಕೋ ಪೈಲಟ್ ಹುದ್ದೆ ಪುರುಷರಿಗೆ ಸೀಮಿತವಾದದ್ದು ಎಂದು ನಂಬಲಾಗಿದೆ. ಭಾರತೀಯ ರೈಲ್ವೇಯಲ್ಲಿ ವೃತ್ತಿ ಪಥವು ಬಹಳ ಚೆನ್ನಾಗಿರುವ ಕಾರಣ ನಾನು ಈ ಕ್ಷೇತ್ರ ಆಯ್ದುಕೊಂಡೆ. ಇನ್ನಷ್ಟು ಹೆಣ್ಣು ಮಕ್ಕಳಿಗೆ ಇದರಿಂದ ಪ್ರೇರಣೆಯಾದರೆ ಸಂತಸ ಪಡುವೆ,” ಎಂದು ತಮ್ಮ ಸಾಧನೆ ಕುರಿತು ಡೆಬೊಲಿನಾ ತಿಳಿಸಿದ್ದಾರೆ.
ತಮ್ಮ ಮಗಳಿಗೆ ಬಾಲ್ಯದಿಂದಲೂ ಲೋಕೋ ಪೈಲಟ್ ಆಗುವ ಕನಸಿತ್ತು ಎಂದು ಡೆಬೊಲಿನಾ ಹೆತ್ತವರಾದ ರಣಬೀರ್ ರಾಯ್ ಹಾಗೂ ಚಂದ್ರಾಣಿ ಭಟ್ಟಾಚಾರ್ಯ ತಿಳಿಸಿದ್ದಾರೆ.