ಯೂನಿಯನ್ ಪಬ್ಲಿಕ್ ಸರ್ವಿಸಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಯನ್ನು ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಗಟ್ಟಲೆ ಯುಪಿಎಸ್‌ಸಿ ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಾರೆ. ಆದರೆ, ಅವರಲ್ಲಿ ಕೆಲವರು ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಐಎಎಸ್, ಐಪಿಎಸ್, ಐ ಆರ್ ಎಸ್ ಅಧಿಕಾರಿಗಳಾಗುತ್ತಾರೆ. ಕ್ರಿಕೆಟಿಗರೊಬ್ಬರು ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವ ಮುನ್ನ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಅವರ್ಯಾರು ಇಲ್ಲಿದೆ ಮಾಹಿತಿ.
ಹೌದು, ಭಾರತೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೊದಲು ಮಾಜಿ ಭಾರತೀಯ ಕ್ರಿಕೆಟಿಗ ಅಮಯ್ ಖುರಾಸಿಯಾ ಅವರು UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ರು. ಅಮಯ್ ಖುರಾಸಿಯಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟಿಗ.
1972 ರಲ್ಲಿ ಜನಿಸಿದ ಅಮಯ್ ಖುರಾಸಿಯಾ ಒಮ್ಮೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಅಜಯ್ ಜಡೇಜಾ ಮುಂತಾದವರ ಜೊತೆಯಲ್ಲಿ ಆಡಿದ್ದರು.
ಮೂಲತಃ ಮಧ್ಯಪ್ರದೇಶದ ಈ ಮಾಜಿ ಕ್ರಿಕೆಟಿಗ ಕೇವಲ 17 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಸ್ಟೈಲಿಶ್ ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟರ್ 1999 ರಲ್ಲಿ ಶ್ರೀಲಂಕಾ ವಿರುದ್ಧ ಪೆಪ್ಸಿ ಕಪ್‌ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಅಮಯ್ ಖುರಾಸಿಯಾ ಅವರನ್ನು 1999 ರ ಭಾರತೀಯ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದರು. ಆದರೆ, ವಿಶ್ವಕಪ್ ಪಂದ್ಯಾವಳಿಯಲ್ಲಿ ಯಾವುದೇ ಪಂದ್ಯದಲ್ಲಿ ಆಡಲಿಲ್ಲ.
ಅಮಯ್ ಖುರಾಸಿಯಾ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವು ದೀರ್ಘವಾಗಿರಲಿಲ್ಲ. ಖುರಾಸಿಯಾ ಮೆನ್ ಇನ್ ಬ್ಲೂ ಪರ ಕೇವಲ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಒಟ್ಟು 149 ರನ್ ಗಳಿಸಿದ್ದಾರೆ. 2001 ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಖುರಾಸಿಯಾ ಅವರು 7,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ಅಮಯ್ ಖುರಾಸಿಯಾ ಅವರು ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡುವ ಮೊದಲು ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೂ, ಖುರಾಸಿಯಾ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಅವರು ಪ್ರತಿನಿಧಿಸಿದ್ರು.
ವರದಿಗಳ ಪ್ರಕಾರ, ಖುರಾಸಿಯಾ ಪ್ರಸ್ತುತ ಭಾರತೀಯ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆಯನ್ನು ಹೊಂದಿದ್ದಾರೆ. ಇದರ ಹೊರತಾಗಿ, ಖುರಾಸಿಯಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಮತ್ತು ಅಂತಾರಾಷ್ಟ್ರೀಯ ಹಂತಕ್ಕೆ ಯುವ ಪ್ರತಿಭೆಗಳನ್ನು ಪೋಷಿಸುತ್ತಾರೆ. ಅವರು ವಿರಾಟ್ ಕೊಹ್ಲಿಯ ಆರ್ಸಿಬಿ ತಂಡದ ಸಹ ಆಟಗಾರ ರಜತ್ ಪಾಟಿದಾರ್ ಮತ್ತು ವೇಗದ ಬೌಲರ್ ಅವೇಶ್ ಖಾನ್ ಅವರಂತಹವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದಾರೆ.