ಕಷ್ಟಕರ ಪರಿಸ್ಥಿತಿಗಳಲ್ಲಿ ದೇಶದ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಆಕಾಂಕ್ಷಿಗಳ ಅನೇಕ ಯಶಸ್ಸಿನ ಕಥೆಗಳನ್ನು ನೀವು ಕೇಳಿರಬೇಕು, ಅಂತಹುದೇ ಒಂದು ಸುದ್ದಿ ಇಲ್ಲಿದೆ. ಉತ್ತರ ಪ್ರದೇಶದ ಹಳ್ಳಿಯೊಂದರ ಬಡ ಕುಟುಂಬದಿಂದ ಬಂದ ಚಾರುಲ್ ಹೊನಾರಿಯಾ, AIIMS (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಸೇರಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಬಾಲ್ಯ ಕಷ್ಟಗಳಿಂದ ಕೂಡಿತ್ತು. ವಿದ್ಯುತ್ ಇಲ್ಲದ ಹಳ್ಳಿ, ಕಚ್ಚಾ ರಸ್ತೆಗಳು, ಸೀಮೆಎಣ್ಣೆ ದೀಪದ ಬೆಳಕಿನಲ್ಲಿಯೇ ಓದು. ಇಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಚಾರುಲ್ ವೈದ್ಯೆಯಾಗುವ ಕನಸು ಕಂಡರು.
10ನೇ ತರಗತಿಯಲ್ಲಿದ್ದಾಗಲೇ ನೀಟ್ ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು. ಆರ್ಥಿಕ ಸಮಸ್ಯೆಯಿಂದಾಗಿ ಕೋಚಿಂಗ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ವಿದ್ಯಾ ಜ್ಞಾನ ಶಾಲೆ ಚಾರುಲ್ ಪ್ರತಿಭೆ ಗುರುತಿಸಿ ಪೂರ್ಣ ವಿದ್ಯಾರ್ಥಿವೇತನ ನೀಡಿತು. ಆಗ ಆನ್ ಲೈನ್ ಮೂಲಕ ಪಠ್ಯವನ್ನು ತೆಗೆದುಕೊಳ್ಳಲು ಮೊಬೈಲ್ ಅನಿವಾರ್ಯವಾಗಿತ್ತು. ಆಗ ಅವರ ತಂದೆ ಸಾಲ ಮಾಡಿ ಫೋನ್ ಕೊಡಿಸಿದ್ದರು.
12ನೇ ತರಗತಿಯಲ್ಲಿ 93% ಅಂಕ ಗಳಿಸುವ ಮೂಲಕ ವಿದ್ಯಾ ಜ್ಞಾನ ಶಾಲೆಯ ಬೆಂಬಲಕ್ಕೆ ಚಾರುಲ್ ನ್ಯಾಯ ಒದಗಿಸಿದರು. 2019ರಲ್ಲಿ ನೀಟ್ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ. ಆದರೆ, ಚಾರುಲ್ ಧೃತಿಗೆಡಲಿಲ್ಲ. 2020ರಲ್ಲಿ ದಕ್ಷಿಣ ಕೋಚಿಂಗ್ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಪಡೆದು ಮತ್ತಷ್ಟು ತಯಾರಿ ನಡೆಸಿದರು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತು. 720ಕ್ಕೆ 680 ಅಂಕ ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 681ನೇ ರ್ಯಾಂಕ್ ಪಡೆದರು. AIIMS ನಲ್ಲಿ MBBS ಸೀಟು ಪಡೆದು ತಮ್ಮ ಕನಸು ನನಸು ಮಾಡಿಕೊಂಡರು. ಚಾರುಲ್ ಹೊನಾರಿಯಾ ಅವರ ಕಥೆ ಕಷ್ಟಪಟ್ಟು ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿಯಾಗಿದೆ.