ಜೋಧ್ಪುರದ ಜಾನುವಾರು ಮೇಳದಲ್ಲಿ ತಮ್ಮ ಪಶುಗಳನ್ನು ತೋರಲು ಸಾವಿರಾರು ಮಂದಿ ಪ್ರತಿ ವರ್ಷ ಆಗಮಿಸುತ್ತಾರೆ. ಆದರೆ ಈ ವರ್ಷ ಇದೇ ಮೇಳಕ್ಕೆ ಬಂದಿದ್ದ ’ಹ್ಯಾಂಡ್ಸಮ್ ಹಂಕ್’ ಕೋಣವೊಂದು ಬರೋಬ್ಬರಿ 1500 ಕೆಜಿ ತೂಕವಿದ್ದು, ಅದರ ಗಾತ್ರವನ್ನು ನೋಡಿಯೇ ಜನರು ದಂಗುಬಡಿದಿದ್ದಾರೆ.
’ಭೀಮ್’ ಹೆಸರಿನ ಈ ಕೋಣದ ಬೆಲೆ 24 ಕೋಟಿ ರೂ.ಗಳು. ಮುರ‍್ರಾ ತಳಿಯ ಎಮ್ಮೆಯ ಜಾತಿಗೆ ಸೇರಿದ ಕೋಣ ಇದಾಗಿದ್ದು, 14 ಅಡಿ ಉದ್ದ, ಆರು ಅಡಿ ಎತ್ತರ ಹಾಗೂ ಸಾಟಿಯಿಲ್ಲದ ಮೈಕಟ್ಟು ಹೊಂದಿದೆ. ಭೀಮನ ನಿರ್ವಹಣೆಗೆ ಮಾಸಿಕ ಎರಡು ಲಕ್ಷ ರೂಪಾಯಿಗಳು ತಗುಲುತ್ತಿದೆ. ಪ್ರತಿನಿತ್ಯ ಒಂದು ಕೆಜಿ ತುಪ್ಪ ಹಾಗೂ 25 ಲೀಟರ್ ಹಾಲನ್ನು ಸೇವಿಸುವ ಭೀಮ ಜೊತೆಯಲ್ಲಿ ಒಂದು ಕಿಲೋ ಗೋಡಂಬಿ-ಬಾದಾಮಿಯನ್ನೂ ಸವಿಯುತ್ತಾನೆ.
ಭೀಮನ ಪೋಷಕ ಅರವಿಂದ್ ಜಂಗಿಡ್ 24 ಕೋಟಿ ರೂಪಾಯಿ ಕೊಟ್ಟು ಆತನನ್ನು ಖರೀದಿ ಮಾಡಲು ಬಂದಿದ್ದ ಅಫ್ಘನ್ ಶೇಯ್ಖ್‌ರ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಮುರ‍್ರಾ ತಳಿಯ ಎಮ್ಮೆಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಅರವಿಂದ್ ಪ್ರಮುಖ ಉದ್ದೇಶವಾಗಿದೆಯಂತೆ.
ಜನಸಾಮಾನ್ಯರಿಗೆ ಬಿಗ್ ಶಾಕ್: ಸಾರ್ವಕಾಲಿಕ ದಾಖಲೆ ಬರೆದ ಟೊಮೆಟೊ ದರ; 15 ಕೆಜಿ ಬಾಕ್ಸ್ ಗೆ 3100 ರೂ.
2019ರಲ್ಲಿ ಪುಷ್ಕರ್ ಜಾನುವಾರು ಮೇಳಕ್ಕೆ ಬಂದಿದ್ದ ಭೀಮ ಆಗಲೇ 1300ಕೆಜಿ ತೂಕವಿದ್ದು, 21 ಕೋಟಿ ರೂ ಬೆಲೆ ಬಾಳುತ್ತಿದ್ದ. ಇದೀಗ ಈತನ ತೂಕ 1500 ಕೆಜಿಗೆ ಬಂದಿದ್ದು, 24 ಕೋಟಿ ರೂಪಾಯಿ ಬೆಲೆ ಬಾಳುವ ಕೋಟ್ಯಾಧೀಶ ಕೋಣನಾಗಿದ್ದಾನೆ.
ಭೀಮನ ವೀರ್ಯಕ್ಕೆ ಜಾನುವಾರು ವರ್ತಕರ ಪೈಕಿ ಭಾರೀ ಬೇಡಿಕೆ ಇದೆ. ಭೀಮನ ವೀರ್ಯಕ್ಕೆ ಜನಿಸಿದ ಕರುಗಳು ಹುಟ್ಟುತ್ತಲೇ 40-50 ಕೆಜಿ ತೂಗಲಿದ್ದು, ವಯಸ್ಕರಾದ ಬಳಿಕ ದಿನವೊಂದಕ್ಕೆ 30-50 ಲೀಟರ್ ಹಾಲು ನೀಡುತ್ತವೆ. ಈತನ ವೀರ್ಯದ 0.25 ಮಿಲೀಯಷ್ಟಕ್ಕೇ 500 ರೂ. ಖರ್ಚಾಗುತ್ತದೆ. ಪ್ರತಿ ವರ್ಷವೂ ಭೀಮನ ವೀರ್ಯದ 10,000 ಘಟಕಗಳನ್ನು ಅರವಿಂದ್ ಮಾರಾಟ ಮಾಡುತ್ತಾರೆ. ಪ್ರತಿಯೊಂದು ಘಟಕದಲ್ಲೂ 4-5 ಮಿಲೀ ವೀರ್ಯವಿರುತ್ತದೆ.