ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ “ಟಾಯ್ಲೆಟ್ ಏಕ್ ಪ್ರೇಮ್ ಕಥಾ” ಚಿತ್ರವನ್ನು ನೀವು ವೀಕ್ಷಿಸಿರಬಹುದು. ಈ ಚಿತ್ರವು ಗ್ರಾಮೀಣ ಭಾರತದಲ್ಲಿ ಇಂದಿಗೂ ಜಾರಿಯಲ್ಲಿ ಇರುವ ಬಯಲು ಮಲವಿಸರ್ಜನೆಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಈ ಶೌಚಾಲಯ ಸಮಸ್ಯೆಗಳು ಹೇಗೆ ಇಡೀ ಸಾಮಾಜಿಕ ಸಮಸ್ಯೆಯಾಗಿ ಹಾಗೂ ಕೌಟುಂಬಿಕ ಕಲಹಕ್ಕೆ ನಾಂದಿ ಹಾಡುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಈ ರೀತಿಯ ಕಥೆಯು ಬಿಹಾರದ ಬಂಕಾ ಜಿಲ್ಲೆಯ ಮಜ್ಘೈ ಗ್ರಾಮದ ನಿವಾಸಿ ಅನಿಲ್ ಮಿಸ್ರಿ ಅವರ ಜೀವನಚರಿತ್ರೆಯನ್ನು ಹೋಲುತ್ತಿದ್ದು, ಅವರ ಕಥೆಯೀಗ ವೈರಲ್ ಆಗುತ್ತಿದೆ. ಅನಿಲ್ ಮಿಸ್ರಿ ಅವರ ಅವಿರತ ಶ್ರಮದಿಂದ ಗ್ರಾಮವು ಬಯಲು ಶೌಚ ಮುಕ್ತವಾಗಿದೆ. ಈ ಮೊದಲು ಶೌಚಾಲಯವನ್ನು ನಿರ್ಮಿಸಿದ್ದರೂ ಅಲ್ಲಿಗೆ ಹೋಗಲು ಜನರು ಹೆದರುತ್ತಿದ್ದರು. ಆದರೆ 48 ವರ್ಷದ ಕೂಲಿ ಕಾರ್ಮಿಕ ಅನಿಲ್ ಮಿಸ್ರಿ ಅವರ ಸತತ ಶ್ರಮದಿಂದಾಗಿ ಈಗ ಗ್ರಾಮದ ನಿವಾಸಿಗಳು ಶೇ.100ರಷ್ಟು ಶೌಚಾಲಯ ಬಳಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಅನಿಲ್ ಅನುಭವ ಹಂಚಿಕೊಂಡಿದ್ದಾರೆ. ಗ್ರಾಮದ ಹೊರಗೆ ರಸ್ತೆ ಬದಿಯಲ್ಲಿಯೇ ಜನರು ಕುಳಿತುಕೊಳ್ಳುವ ಅನಿವಾರ್ಯತೆ ಇದ್ದುದರಿಂದ ಕೊಳಕಿನಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಸ್ವತಃ ಗ್ರಾಮಸ್ಥರಿಗೆ ಇದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದೆ.
ಕಷ್ಟಪಟ್ಟು ಶೌಚಾಲಯ ನಿರ್ಮಾಣ ಮಾಡಲಾಯಿತಾದರೂ ಜನರು ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದರು. ಕೆಲವರು ಮಾತ್ರ ಇದನ್ನು ಅರ್ಥ ಮಾಡಿಕೊಂಡರು. ಅವರ ಜತೆಗೂಡಿ ಪಂಚಾಯತ್ ಮುಖ್ಯಸ್ಥ ಮೃತ್ಯುಂಜಯ್ ಕುಮಾರ್ ಅವರ ಸಹಾಯ ಬೇಡಿದೆ. ಉಳಿದವರ ಮನವೊಲಿಸಲು ಇದರಿಂದ ಸಾಧ್ಯವಾಯಿತು ಎಂದು ತಾವು ಪಟ್ಟಿರುವ ಶ್ರಮದ ಕುರಿತು ಅನಿಲ್ ಹೇಳುತ್ತಾರೆ.