ಬಾಲಿವುಡ್ ದಂಪತಿಗಳಲ್ಲಿ ಬೆಸ್ಟ್ ಜೋಡಿ ಯಾರೆಂದರೆ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್ ಮುಖ್ ಎಂಬ ಮಾತು ಕೇಳಿಬರುತ್ತದೆ. ಅವರಿಬ್ಬರ ಸ್ನೇಹ, ಪ್ರೀತಿ, ಹೊಂದಾಣಿಕೆಯಿಂದಾಗಿ ಈ ಜೋಡಿ ಗಮನ ಸೆಳೆಯುತ್ತದೆ. ಅವರ ಸಂಬಂಧವನ್ನು ಚಿತ್ರರಂಗದಲ್ಲಿ ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ಇತ್ತೀಚಿಗೆ ಜೆನಿಲಿಯಾ ಡಿಸೋಜಾ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅನೇಕ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದರೆ, ಇತರರು ಅವರ ಮತ್ತು ರಿತೇಶ್ ದೇಶಮುಖ್ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ವಿಶಿಷ್ಟ ಪ್ರೇಮಕಥೆಯನ್ನು ಹೈಲೈಟ್ ಮಾಡಿದ್ದಾರೆ.
ಜೆನಿಲಿಯಾ ಡಿಸೋಜಾ ಅವರು ನಟ ರಿತೇಶ್ ದೇಶಮುಖ್ ಅವರನ್ನು 2012 ರಲ್ಲಿ ವಿವಾಹವಾಗುವ ಮುನ್ನ ಇಬ್ಬರೂ 10 ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು.
ಜೆನಿಲಿಯಾ ಡಿಸೋಜಾ ಆಗಸ್ಟ್ 5, 1987 ರಂದು ಮುಂಬೈನಲ್ಲಿ ಜನಿಸಿದರು. ಅವರು ಮಂಗಳೂರಿನ ಕ್ಯಾಥೋಲಿಕ್ ಕುಟುಂಬಕ್ಕೆ ಸೇರಿದವರು. ಆಕೆಯ ತಾಯಿ ಜೀನೆಟ್ ಡಿಸೋಜಾ ಅವರು ಫಾರ್ಮಾ ಮಲ್ಟಿನ್ಯಾಷನಲ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಅವರ ತಂದೆ ನೀಲ್ ಡಿಸೋಜಾ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದಾರೆ. ಅವರ ಕಿರಿಯ ಸೋದರ ನಿಗೆಲ್ ಡಿಸೋಜಾ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ಕೆಲಸ ಮಾಡುತ್ತಾರೆ.
ಬಾಲಿವುಡ್ ಚಿತ್ರವೊಂದರ ಸ್ಕ್ರಿಪ್ಟ್ ನಂತೆ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ಅವರ ಪ್ರೇಮಕಥೆಯು ತುಂಬಾ ವಿಶಿಷ್ಟವಾಗಿದೆ. ಜೆನಿಲಿಯಾ ಡಿಸೋಜಾ ಸಿನಿರಂಗಕ್ಕೆ ಬಂದಾಗ, ಅವರು ತಮ್ಮ ಚೊಚ್ಚಲ ಚಿತ್ರದ ನಾಯಕ ನಟ ರಿತೇಶ್ ದೇಶಮುಖ್ ಅವರ ಪ್ರೀತಿಯ ಬಲೆಯಲ್ಲಿ ಬಿದ್ದರು. ಇಬ್ಬರೂ ‘ತುಜೆ ಮೇರಿ ಕಸಮ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು.
‘ತುಜೆ ಮೇರಿ ಕಸಮ್’ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಒಮ್ಮೆ ತಮ್ಮ ಪ್ರೇಮಕಥೆಯನ್ನು ವಿವರಿಸುವಾಗ, ರಿತೇಶ್ ದೇಶ್‌ಮುಖ್ ಅವರು ತಮ್ಮ ಮೊದಲ ಚಿತ್ರದ ಶೂಟಿಂಗ್‌ಗಾಗಿ ಇಬ್ಬರೂ ಹೊರಗೆ ಹೋಗುತ್ತಿದ್ದಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜೆನಿಲಿಯಾ ಡಿಸೋಜಾ ಅವರನ್ನು ಮೊದಲು ಭೇಟಿಯಾದರು ಎಂದು ಹೇಳಿದರು.
10 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2012 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾಗಿ ರಿತೇಶ್ ದೇಶಮುಖ್ ಹೇಳಿದ್ದಾರೆ. ಜೆನಿಲಿಯಾ ಡಿಸೋಜಾ ಅವರು ತಮ್ಮ ಮೊದಲ ಭೇಟಿಯಿಂದಲೂ ನನ್ನನ್ನು ಇಷ್ಟಪಟ್ಟಿದ್ದರು. ಆದರೆ ರಾಜಕೀಯ ಕುಟುಂಬಕ್ಕೆ ಸೇರಿದ ನಾನು ತುಂಬಾ ಸೊಕ್ಕಿನ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಅವರು ಹೆದರುತ್ತಿದ್ದರು. ನಾನು ಮುಖ್ಯಮಂತ್ರಿಯ ಮಗನಾಗಿದ್ದರಿಂದ ಸ್ವಲ್ಪ ದುರಹಂಕಾರಿ ಮನೋಭಾವನೆ ಇರುತ್ತದೆ ಎಂದು ಭಾವಿಸಿದ್ದರು. ನಂತರ ನನ್ನ ಜೊತೆ ‘ತುಜೆ ಮೇರಿ ಕಸಮ್’ ಸಿನಿಮಾ ಮಾಡಿದಾಗ ಆಕೆಯ ಗೊಂದಲ ನಿವಾರಣೆಯಾಗಿ ರಿತೇಶ್ ದೇಶ್‌ಮುಖ್ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಅರಿತುಕೊಂಡರು ಎಂದು ರಿತೇಶ್ ಹೇಳಿದರು.
ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ನಿಶ್ಚಿತಾರ್ಥಕ್ಕೆ ಸಿದ್ಧರಾಗಿದ್ದಾರೆ ಎಂದು ವರದಿಯಾಗ್ತಿದ್ದಂತೆ ರಿತೇಶ್ ತಂದೆ- ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಒಪ್ಪಿರಲಿಲ್ಲ. ಆದಾಗ್ಯೂ ಫೆಬ್ರವರಿ 2012 ರಲ್ಲಿ ಇಬ್ಬರೂ ಮದುವೆಯಾದ ನಂತರ ಎಲ್ಲವೂ ಸುಗಮವಾಯಿತು.
ರಿತೇಶ್ – ಜೆನಿಲಿಯಾ ದಂಪತಿ ರಿಯಾನ್ ಎಂಬ ಮೊದಲ ಮಗನನ್ನು ನವೆಂಬರ್ 2014 ಮತ್ತು ಅವರ ಎರಡನೇ ಮಗ ರಹಿಲ್ ನನ್ನು ಜೂನ್ 2016 ರಲ್ಲಿ ಪಡೆದರು.
ರಿತೇಶ್ ದೇಶಮುಖ್ ಅವರನ್ನು ವಿವಾಹವಾದ ನಂತರ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯ ಸೊಸೆಯಾದ ನಂತರ, ಜೆನಿಲಿಯಾ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಮದುವೆಯ ನಂತರ ಚಿತ್ರರಂಗಕ್ಕೆ ಮರಳಿದರೂ ನಟಿಯಾಗಿ ಬಾಲಿವುಡ್‌ನಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಈಗ ಜೆನಿಲಿಯಾ ಡಿಸೋಜಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪತಿಯೊಂದಿಗೆ ರೀಲ್ಸ್ ಮಾಡುತ್ತಿದ್ದು ಅವರ ರೀಲ್ಸ್ ಕಂಟೆಂಟ್ ಹೆಚ್ಚಿನ ಗಮನ ಸೆಳೆಯುತ್ತವೆ.