ಭೂಮಿ ಮೇಲಿನ ಸ್ವರ್ಗ ಎಂದೇ ಹೆಸರಾಗಿರುವ ಕಾಶ್ಮೀರ ಎಂದ ತಕ್ಷಣ ನಿಮಗೆ ಏನು ನೆನಪಾಗುತ್ತದೆ? ಅದ್ಭುತವಾದ ಪ್ರಕೃತಿ ಸೌಂದರ್ಯದ ಪ್ರತೀಕವಾದ ದಾಲ್ ಲೇಕ್, ದೊಣಿ ಮನೆಗಳು, ಹುಲ್ಲುಗಾವಲುಗಳು, ಪೈನ್ ಮರಗಳು.
ಇಂಥ ಸ್ವರ್ಗ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಮಾನವ ಹಾಗೂ ಪ್ರಾಣಿಗಳ ನಡುವಿನ ಕಾಳಗದ ಪ್ರಕರಣಗಳು ಜೋರಾಗಿವೆ. ಈ ಕಾರಣದಿಂದಾಗಿ ಅನೇಕ ಬಾರಿ ಆಸ್ತಿ ಪಾಸ್ತಿಗೆ ಹಾನಿ, ಜೀವನೋಪಾಯಗಳಿಗೆ ಪೆಟ್ಟು ಬೀಳುವ ನಿದರ್ಶನಗಳು ಸಹ ಹೆಚ್ಚಾಗಿವೆ.
ಮಾನವ-ಪ್ರಾಣಿಯ ಸಂಘರ್ಷದ ಪರಿಣಾಮಗಳನ್ನು ನೇರವಾಗಿ ಎದುರಿಸುವ ವನ್ಯಜೀವಿ ಸಂರಕ್ಷಕರ ಧೈರ್ಯ ನಿಜಕ್ಕೂ ಮೆಚ್ಚಲೇಬೇಕು. ಕಾಶ್ಮೀರದ ಏಕೈಕ ಮಹಿಳಾ ವನ್ಯಸಂರಕ್ಷಕಿ ಆಲಿಯಾ ಮಿರ್ ಕಳೆದ 17 ವರ್ಷಗಳಿಂದ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಜೀವನ ಮುಡಿಪಿಟ್ಟಿದ್ದಾರೆ.
ವೈಲ್ಡ್‌ಲೈಫ್ ಎಸ್‌ಓಎಸ್ ಜಮ್ಮು ಮತ್ತು ಕಾಶ್ಮಿರದ ಏಕೈಕ ಮಹಿಳಾ ಸಿಬ್ಬಂದಿಯಾಗಿರುವ ಆಲಿಯಾ, ಹಾವುಗಳು, ಕರಡಿಗಳೂ, ಪಕ್ಷಿಗಳು ಹಾಗು ಚಿರತೆಗಳ ಉಪಟಳವನ್ನು ಎದುರಿಸುತ್ತಾ ಜನರನ್ನು ಹಾಗೂ ಪ್ರಾಣಿಗಳನ್ನು ರಕ್ಷಿಸಿಕೊಂಡು ಬಂದಿದ್ದಾರೆ.
ತಮ್ಮ ಈ ಸೇವೆಗಾಗಿ ಆಲಿಯಾರನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಳೆದ ಮಾರ್ಚ್‌ನಲ್ಲಿ ಆಚರಿಸಲಾದ ವಿಶ್ವ ವನ್ಯಜೀವಿ ದಿನದಂದು ಅಭಿನಂದಿಸಿದ್ದಾರೆ. ಈ ಮೂಲಕ ಈ ಗೌರವ ಪಡೆದ ಜಮ್ಮು ಕಾಶ್ಮೀರದ ಮೊದಲ ಮಹಿಳೆಯಾಗಿದ್ದಾರೆ ಆಲಿಯಾ.
ಕಳೆದ ಮೇನಲ್ಲಿ ಆಲಿಯಾ ಆರು ಅಡಿ ಉದ್ದದ ಹಾವೊಂದನ್ನು ರಕ್ಷಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.