ನನ್ನನ್ನು ಕಟ್ಟಿಹಾಕಿ ಮರ್ಮಾಂಗ ಕತ್ತರಿಸಲು ಪತ್ನಿ ಯತ್ನಿಸಿದ್ದಾಳೆಂದು ಪತಿ ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ವರದಿಯಾಗಿದೆ. ಪತ್ನಿ ಕಿರುಕುಳ ಮತ್ತು ಹಲ್ಲೆ ಆರೋಪ ಹೊರಿಸಿ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಪತ್ನಿ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, ಸುಳ್ಳು ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಾಸ್ತವವಾಗಿ ಇಡೀ ಘಟನೆಯು ಮೀರತ್‌ನ ಲೋಹಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಹಿದ್‌ಪುರ ಪ್ರದೇಶದಲ್ಲಿ ನಡೆದಿದೆ. 6 ವರ್ಷಗಳ ಹಿಂದೆ ಹರಿದ್ವಾರದ ಜ್ವಾಲಾಪುರ ಮೂಲದ ಹುಡುಗಿಯನ್ನ ಅಸ್ಸಾಂ ಮೂಲದ ಯುವಕ ಮದುವೆಯಾಗಿದ್ದ. ಆದರೆ ಆತನ ಹೆಂಡತಿ ಆಗಾಗ್ಗೆ ಜಗಳವಾಡುತ್ತಾ, ಅವನಿಗೆ ಕಿರುಕುಳ ನೀಡುತ್ತಾ ದೈಹಿಕವಾಗಿ ಹಲ್ಲೆ ಮಾಡುತ್ತಾಳೆಂದು ಪತಿ ಆರೋಪಿಸಿದ್ದಾನೆ.
ತನ್ನ ಹೆಂಡತಿಯ ಜಗಳದಿಂದ ಬೇಸತ್ತ ಪತಿ ತಿರುಗಿಬಿದ್ದಾಗ ತನ್ನ ಖಾಸಗಿ ಅಂಗಗಳನ್ನು ಕತ್ತರಿಸಲು ಪ್ರಯತ್ನಿಸಿದಳು. ಆಕೆ ನನ್ನ ಕೈಕಾಲುಗಳನ್ನು ಕಟ್ಟಿ ಚಾಕುವಿನಿಂದ ಖಾಸಗಿ ಅಂಗಗಳನ್ನು ಕತ್ತರಿಸಲು ಯತ್ನಿಸಿದ್ದಾಳೆ. ಮನೆಯಲ್ಲಿ ಆಕೆಯ ಬೇಡಿಕೆಗಳನ್ನು ಈಡೇರಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು ಎಂದು ಪತಿ ಹೇಳಿದ್ದಾರೆ.
ಕಿರುಕುಳಕ್ಕೊಳಗಾದ ಪತಿ, ಪತ್ನಿ ವಿರುದ್ಧ ಮೀರತ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಂತರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಮಸ್ಯೆ ಬಗೆಹರಿಸಲು ಪಂಚಾಯ್ತಿ ಕೂಡ ನಡೆಸಲಾಯಿತು, ಆದರೆ ಪತ್ನಿ ಒಪ್ಪಲಿಲ್ಲ ಎಂದು ದೂರುದಾರ ಹೇಳಿದ್ದಾನೆ. ಆಕೆ ನನ್ನ ಮೇಲೆ ದೌರ್ಜನ್ಯ ಎಸಗುತ್ತಲೇ ಇದ್ದಾಳೆ ಮತ್ತು ನನ್ನ ವಯಸ್ಸಾದ ಪೋಷಕರೊಂದಿಗೆ ವಾದ ಮಾಡುತ್ತಾಳೆ ಎಂದಿದ್ದಾನೆ.
ಏತನ್ಮಧ್ಯೆ, ಪತ್ನಿ ಎಲ್ಲಾ ಆರೋಪಗಳನ್ನು ಸುಳ್ಳು ಎಂದಿದ್ದು ತನ್ನ ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಇದನ್ನ ಪ್ರಶ್ನಿಸಿದ್ರೆ ಸುಳ್ಳು ಆರೋಪ ಹೊರಿಸಿದ್ದಾನೆ ಎಂದಿದ್ದಾಳೆ.