ಬೆಂಗಳೂರು: ಮೆಡಿಕಲ್ ಸೀಟ್ ಆಮಿಷ ನೀಡಿ ವಿದ್ಯಾರ್ಥಿಯೋರ್ವರಿಗೆ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮೈಸೂರಿನ ವಿದ್ಯಾರ್ಥಿ ಹಾಗೂ ಕುಟುಂಬದವರಿಗೆ ದಾವಣಗೆರೆಯಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ಐವರು ಆರೋಪಿಗಳು ಬರೋಬ್ಬರಿ 10.80 ಲಕ್ಷ ರೂಪಾಯಿ ಪಡೆದು ಬಳಿಕ ನಾಪತ್ತೆಯಾಗಿದ್ದರು.
ಈ ಸಂಬಂಧ ವಿದ್ಯಾರ್ಥಿ ಹಾಗೂ ಕುಟುಂಬ ಹೈಗ್ರೌಂಡ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೈಸೂರು ಮೂಲದ ವಿದ್ಯಾರ್ಥಿ ಮೆಡಿಕಲ್ ಸೀಟಿಗಾಗಿ ಯತ್ನಿಸುತ್ತಿದ್ದ. ಈ ಬಾರಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿಲ್ಲ ಎಂದು ಮತ್ತೊಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಈ ವೇಳೆ ವಿದ್ಯಾರ್ಥಿ ಅಣ್ಣನ ಮೊಬೈಲ್ ಗೆ ಅನಾಮಿಕ ವ್ಯಕ್ತಿಯಿಂದ ಮೆಸೇಜ್ ಬಂದಿತ್ತು. ನಾವು ನಾಲ್ಕೈದು ವರ್ಷಗಳಿಂದ ದಾವಣಗೆರೆಯಲ್ಲಿ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ. ಬೆಂಗಳೂರಿಗೆ ಬಂದು ಮಾತನಾಡುವಂತೆ ಕರೆದಿದ್ದರು.
ವಿದ್ಯಾರ್ಥಿ ಹಾಗೂ ಪೋಷಕರು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಕಚೇರಿಯೊಂದಕ್ಕೆ ಹೋಗಿದ್ದಾರೆ. ಈ ವೇಳೆ ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಓರ್ವ ವ್ಯಕ್ತಿ ಪರಿಚಯ ಮಾಡಿಕೊಂಡಿದ್ದಾರೆ. ಸರ್ಕಾರಿ ಕೋಟಾದಲ್ಲೇ ಸೀಟ್ ಕೊಡಿಸುವುದಾಗಿ ಹೇಳಿ 3 ಲಕ್ಷ ಅಡ್ವಾನ್ಸ್ ಪಡೆದಿದ್ದಾರೆ. ಇನ್ನೋರ್ವ ವ್ಯಕ್ತಿ ಬಾಸ್ ಎಂದು ಪರಿಚಯ ಮಾಡಿಕೊಟ್ಟಿದ್ದರು. ಅವರಿಗೆ 10 ಲಕ್ಷ ನೀಡಿದರೆ ಸೀಟ್ ಸಿಗುವುದು ಖಚಿತ ಎಂದು ಹೇಳಿದ್ದಾರೆ.
ಎಲ್ಲಾ ಮಾತುಕತೆ ಬಳಿಕ ಗ್ಯಾಂಗ್ ವಿದ್ಯಾರ್ಥಿ ಹಾಗೂ ಕುಟುಂಬದಿಂದ 10.80 ಲಕ್ಷ ಹಣ ಪಡೆದಿದೆ. ಬಳಿಕ ಮೈಸೂರಿಗೆ ಹಿಂತಿರುಗಿದ್ದಾರೆ. ಮೆಡಿಕಲ್ ಸೀಟ್ ಗಾಗಿ ವಿದ್ಯಾರ್ಥಿ ಹಾಗೂ ಪೋಷಕರು ಹಣ ಪಡೆದವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಕನ್ನಿಂಗ್ ಹ್ಯಾಮ್ ಕಚೇರಿಗೆ ಬಂದು ನೋಡಿದರೆ ಅಲ್ಲಿಯೂ ವ್ಯಕ್ತಿ ಇರಲಿಲ್ಲ. ವಂಚನೆಯಾಗಿದೆ ಎಂದು ಅರಿವಾಗುತ್ತಿದ್ದಂತೆ ವಿದ್ಯಾರ್ಥಿ ಹಾಗೂ ಪೋಷಕರು ಹೈಗ್ರೌಂಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.