ಬೆಂಗಳೂರು: 133 ಉಳಿಕೆ ವೈದ್ಯಕೀಯ ಸೀಟು ತುಂಬಲು ನವೆಂಬರ್ 7ರಿಂದ 10ರವರೆಗೆ ವಿಶೇಷ ಕೌನ್ಸೆಲಿಂಗ್ ನಡೆಸಲಾಗುವುದು. ನವೆಂಬರ್ 15ರೊಳಗೆ ಪ್ರವೇಶ ಪಡೆಯಬೇಕಿದೆ.
ರಾಜ್ಯದಲ್ಲಿ ಅಂತಿಮ ಸುತ್ತಿನ ಸೀಟು ಹಂಚಿಕೆಯ ನಂತರವೂ 133 ವೈದ್ಯಕೀಯ ಪದವಿ ಸೀಟುಗಳು ಖಾಲಿ ಉಳಿದಿದ್ದು, ಅವುಗಳನ್ನು ಭರ್ತಿ ಮಾಡಲು ವಿಶೇಷ ಉಳಿಕೆ ಸುತ್ತಿನ ಕೌನ್ಸೆಲಿಂಗ್ ನಡೆಸಲು ಸರ್ಕಾರ ಮುಂದಾಗಿದೆ.
ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಉಳಿಕೆ ಸೀಟುಗಳ ಭರ್ತಿಗೆ ರಾಜ್ಯಮಟ್ಟದಲ್ಲಿ ನವೆಂಬರ್ 7ರಿಂದ 10ರವರೆಗೆ ವಿಶೇಷ ಉಳಿಕೆ ಸುತ್ತಿನ ಕೌನ್ಸೆಲಿಂಗ್ ನಡೆಸಿ, ಸೀಟು ಪಡೆದವರು ನವೆಂಬರ್ 15ರೊಳಗೆ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಳ್ಳಬೇಕಿದೆ ಎಂದು ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಳಿಕೆ ಸೀಟುಗಳ ಹಂಚಿಕೆಗೆ ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಈ ವರ್ಷ ರಾಜ್ಯದಲ್ಲಿ 11,020 ವೈದ್ಯಕೀಯ ಪದವಿ ಸೀಟುಗಳು ಲಭ್ಯವಿದ್ದು, 133 ಸೀಟುಗಳು ಭರ್ತಿಯಾಗದೆ ಉಳಿದಿವೆ. ಸುಪ್ರೀಂ ಕೋರ್ಟ್ ಆದೇಶದಂತೆ ಈ ಎಲ್ಲಾ ಸೀಟುಗಳ ಭರ್ತಿ ಪ್ರಕ್ರಿಯೆಯನ್ನು ಕಾಲೇಜುಗಳಿಗೆ ಬಿಡದೆ ಅರ್ಹ ನೀಟ್ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲು ಕೆಇಎಗೆ ಸೂಚನೆ ನೀಡಲಾಗಿದೆ.
ಈ ವಿಶೇಷ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು 50,000 ರೂ. ಭದ್ರತಾ ಠೇವಣಿ ಪಾವತಿಸಬೇಕು. ಸೀಟು ಸಿಗದಿದ್ದರೆ ಹಣ ಮರುಪಾವತಿಸಲಾಗುವುದು. ಸೀಟು ದೊರೆ ದೊರೆತೂ ಪ್ರವೇಶ ಪಡೆಯದಿದ್ದರೆ ಠೇವಣಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಂತಹ ಅಭ್ಯರ್ಥಿಗಳು ಮುಂದಿನ ವರ್ಷ ನೀಟ್ ಬರೆಯಲು ನಿರ್ಬಂಧ ವಿಧಿಸಲಾಗುವುದು ಎಂದು ಹೇಳಲಾಗಿದೆ.