
ಚಿಕ್ಕಬಳ್ಳಾಪುರ: ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ. ಈ ನಡುವೆ ಹುಚ್ಚುನಾಯಿಯೊಂದು ಮೆಡಿಕಲ್ ಕಾಲೇಜಿಗೆ ನುಗ್ಗಿ ಮೂವರು ಸಿಬ್ಬಂದಿಗಳಿಗೆ ಕಚ್ಚಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಅರೂರು ಬಳಿಯ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿಗೆ ಏಕಾಏಕಿ ನುಗ್ಗಿ ದಾಳಿ ನಡೆಸಿರುವ ಹುಚ್ಚು ನಾಯಿ ಮೂರು ಸಿಬ್ಬಂದಿಗಳಿಗೆ ಕಚ್ಚಿದೆ. ಹುಚ್ಚುನಾಯಿ ದಾಳಿ ಕಂಡು ವಿದ್ಯಾರ್ಥಿಗಳು, ಇತರೆ ಸಿಬ್ಬಂದಿಗಳು ದಿಕ್ಕಾಪಾಲಾಗಿ ಓಡಿ ರಕ್ಷಿಸಿಕೊಂಡಿದ್ದಾರೆ. ಗಾಯಾಳು ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆಯೂ ಕೂಡ ಇದೇ ಹುಚ್ಚುನಾಯಿ ಮಗುವಿನ ಮೇಲೆ ದಾಳಿ ನಡೆಸಿತ್ತು. ಅಲ್ಲದೇ ಅರೂರು ಬಳಿಯ ಮನೆಗೆ ನುಗ್ಗಿ ಅಲ್ಲಿದ್ದ ಜನರನ್ನು ಕಚ್ಚಿದೆ. ಅಷ್ಟೇ ಹಲ್ಲ ಜಾನುವಾರುಗಳ ಮೇಲೂ ಹುಚ್ಚುನಾಯಿ ದಾಳಿ ನಡೆಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ನಗರಸಭೆ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.