ನವದೆಹಲಿ: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅರ್ಧದಷ್ಟು ಸೀಟುಗಳಿಗೆ ಸರ್ಕಾರಿ ಶುಲ್ಕ ಪಡೆಯಬೇಕಿದೆ. ಕ್ಯಾಪಿಟೇಷಶನ್ ಶುಲ್ಕಕ್ಕೆ ನಿರ್ಬಂಧ ವಿಧಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ(NMC) ಆದೇಶ ಹೊರಡಿಸಲಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ಟು ಬಿ ಮೆಡಿಕಲ್ ವಿಶ್ವವಿದ್ಯಾಲಯಗಳು ಶೇಕಡ 50 ರಷ್ಟು ವೈದ್ಯಕೀಯ ಸೀಟುಗಳಿಗೆ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ನಿಗದಿಪಡಿಸಿದಷ್ಟು, ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ಹೊರಡಿಸಿದೆ.
ಮೆಡಿಕಲ್ ಕೋರ್ಸ್ ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ನೀಟ್ ಪರೀಕ್ಷೆ ಮೂಲಕ ಆಯ್ಕೆ ಮಾಡಿದರೂ ಸೀಟುಗಳ ಹಂಚಿಕೆ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದ್ದು, ಶುಲ್ಕ ನಿಗದಿ ಪ್ರಮಾಣ ಕೂಡ ವಿಭಿನ್ನವಾಗಿದೆ. ಖಾಸಗಿ ಕಾಲೇಜುಗಳು ಒಂದೊಂದು ಮಾನದಂಡವನ್ನು ಅಳವಡಿಸಿಕೊಂಡಿದ್ದು, ಶೇಕಡ 60 ರಷ್ಟು ಮ್ಯಾನೇಜ್ಮೆಂಟ್ ಸೀಟುಗಳು, ಶೇಕಡ 40ರಷ್ಟು ಸರ್ಕಾರಿ ಕೋಟಾ ಸೀಟುಗಳನ್ನು ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ.
ಕೆಲವು ಡೀಮ್ಡ್ ವಿವಿಗಳು ಸರ್ಕಾರಿ ಕೋಟಾ ಸೀಟುಗಳನ್ನು ನೀಡಲು ನಿರಾಕರಿಸಿದ್ದವು. ಅಲ್ಲದೆ ಕೆಲವು ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳು ತಮ್ಮದೇ ಆದ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ಶುಲ್ಕ ನಿಗದಿಯಲ್ಲಿಯೂ ಒಂದು ಮಾನದಂಡ ಅನುಸರಿಸುತ್ತಿವೆ. ಸರ್ಕಾರಿ ಕೋಟಾದಡಿ ಕೆಲವು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಕೂಡ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮೆಡಿಕಲ್ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿಯಲ್ಲಿ ಏಕರೂಪತೆ ತರಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ 2019 ರ ನವೆಂಬರ್ 23 ರಂದು ತಜ್ಞರ ಸಮಿತಿ ನೇಮಕ ಮಾಡಿದ್ದು, ಈ ಸಮಿತಿ ಅಧ್ಯಯನ ನಡೆಸಿ 2021 ರ ಮೇ 25ರಂದು ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಸಲ್ಲಿಕೆಯಾದ ಪ್ರತಿಕ್ರಿಯೆ, ಆಕ್ಷೇಪಣೆಗಳ ಸಮಗ್ರ ಅಧ್ಯಯನ ನಡೆಸಿ ಕರಡು ಮಾರ್ಗಸೂಚಿ ಬಿಡುಗಡೆ ಮಾಡಲು ರಾಷ್ಟ್ರಿಯ ವೈದ್ಯಕೀಯ ಆಯೋಗದಿಂದ ಮತ್ತೊಂದು ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ಶಿಫಾರಸುಗಳನ್ನು 2021 ರ ಡಿ. 29 ರಂದು ಸ್ವೀಕರಿಸಲಾಗಿದ್ದು, ಈಗ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜ್ ಗಳ ಅರ್ಧದಷ್ಟು ಸೀಟುಗಳಿಗೆ ಸರ್ಕಾರಿ ಶುಲ್ಕ ಪಡೆಯುವಂತೆ ಆದೇಶ ಹೊರಡಿಸಲಾಗಿದ್ದು, ಕ್ಯಾಪಿಟೇಷನ್ ಫೀಸ್ ಗೆ ನಿರ್ಬಂಧ ಹೇರಲಾಗಿದೆ.