ಬೆಂಗಳೂರು: 2023 -24 ನೇ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಅಗತ್ಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ರಜೆ ಅವಧಿಯಲ್ಲಿ ಉಳಿಕೆಯಾದ ಅಕ್ಕಿ, ಗೋಧಿ, ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ ಮತ್ತು ಹಾಲಿನ ಪುಡಿ ಸೇರಿದಂತೆ ಇತರೆ ಪದಾರ್ಥಗಳನ್ನು ಪರಿಶೀಲಿಸಿ ದಾಖಲಿಸಬೇಕು. ಅವಧಿ ಮುಗಿದ ಪದಾರ್ಥಗಳಿದ್ದರೆ ಅವುಗಳನ್ನು ಬಿಸಿಯೂಟಕ್ಕೆ ಬಳಕೆ ಮಾಡಬಾರದು ಎಂದು ತಿಳಿಸಲಾಗಿದೆ.
ಕಳಪೆಯಾದ, ಹುಳ ತಿಂದ ಹಾಗೂ ಗುಣಮಟ್ಟ ಹಾಳಾದ, ಕೊಳೆತ ಆಹಾರ ಪದಾರ್ಥಗಳನ್ನು ಬೇರ್ಪಡಿಸಿ ಹೊರಹಾಕುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.