ಬೆಂಗಳೂರು: ಅಕ್ಟೋಬರ್ 21 ರಿಂದ ರಾಜ್ಯದಲ್ಲಿ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು. ಜೊತೆಗೆ ಬಿಸಿಯೂಟ ಯೋಜನೆಯನ್ನು ಕೂಡ ಆರಂಭಿಸಬೇಕೆಂದು ಶಿಕ್ಷಣ ತಜ್ಞರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶಿಕ್ಷಣ ತುರ್ತು ಪರಿಸ್ಥಿತಿಗಾಗಿ ರಾಷ್ಟ್ರೀಯ ಒಕ್ಕೂಟದ ಡಾ.ವಿ.ಪಿ. ನಿರಂಜನಾರಾಧ್ಯ ಮತ್ತು ಗುರುಮೂರ್ತಿ ಕಾಶಿನಾಥನ್ ಅವರು, ಶಾಲೆಗಳನ್ನು ದೀರ್ಘಾವಧಿ ಬಂದ್ ಮಾಡುವುದರಿಂದ ಮಕ್ಕಳ ಶೈಕ್ಷಣಿಕ, ಭಾವನಾತ್ಮಕ, ಪೌಷ್ಠಿಕ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗುವುದರಿಂದ ಶಾಲೆ, ಅಂಗನವಾಡಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಕ್ಕಳ ಮೇಲಿನ ದೌರ್ಜನ್ಯ, ಅಪೌಷ್ಟಿಕತೆ, ಬಾಲಕಾರ್ಮಿಕ ಪದ್ಧತಿ, ಶಾಲೆಯಿಂದ ಹೊರಗುಳಿಯುವ ಪ್ರಕರಣ ಹೆಚ್ಚಿದೆ. ಇನ್ನು ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 120 ದೇಶಗಳ ಪೈಕಿ 104ನೇ ಸ್ಥಾನದಲ್ಲಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಅವರ ಪೋಷಣೆಗೆ ಬಿಸಿಯೂಟ ಮುಖ್ಯವಾಗಿದೆ. ಹೀಗಾಗಿ ದಸರಾ ರಜೆ ಮುಗಿದ ಕೂಡಲೇ ಅಕ್ಟೋಬರ್ 21 ರಿಂದ ಶಾಲೆ, ಅಂಗನವಾಡಿ, ಬಿಸಿಯೂಟ ಯೋಜನೆ ಆರಂಭಿಸಬೇಕೆಂದು ಹೇಳಲಾಗಿದೆ.