ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿ ಬಿಸಿ ಊಟದ ಸಾಂಬಾರ್ ಬಿದ್ದು ಅಡುಗೆ ಸಹಾಯಕಿ ಸಾವನ್ನಪ್ಪಿದ್ದಾರೆ.
ಮುಂಡಗೋಡದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಡುಗೆ ಸಹಾಯಕಿ ಅನ್ನಪೂರ್ಣ ಹುಳ್ಯಾಳ ಮೃತಪಟ್ಟವರು. ಆಗಸ್ಟ್ 19ರಂದು ಅಡುಗೆ ಮನೆಯಿಂದ ಶಾಲಾ ಮಕ್ಕಳಿಗೆ ಸಾಂಬಾರ್ ಬಡಿಸಲು ಮತ್ತೊಬ್ಬ ಸಹಾಯಕಿಯೊಂದಿಗೆ ಪಾತ್ರೆ ತರುವ ವೇಳೆ ಕಾಲು ಜಾರಿ ಬಿದ್ದ ಅನ್ನಪೂರ್ಣ ಅವರ ಮೇಲೆ ಬಿಸಿ ಸಾಂಬಾರ್ ಚೆಲ್ಲಿದೆ.
ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಗೆ ಕಳುಹಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕಲ್ಪಿಸುವುದಾಗಿ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.