ಬೆಂಗಳೂರು: ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಪೌಷ್ಟಿಕಾಂಶ ಇರುವ ಗುಣಮಟ್ಟದ ಆಹಾರ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಎರಡೂ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದ್ದಾರೆ.
ಆಹಾರ ಇಲಾಖೆ ಸಾರ್ವಜನಿಕ ವಿತರಣಾ ಪದ್ಧತಿ ಮೂಲಕ ಅಕ್ಕಿ ಪೂರೈಸುತ್ತಿದ್ದು, ಗುಣಮಟ್ಟ ಹೆಚ್ಚಳ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಅಧಿಕಾರಿಗಳು ಗುಣಮಟ್ಟ ಹೆಚ್ಚಳಕ್ಕೆ ಅಕ್ಕಿಗೆ ನಿಗದಿ ಮಾಡಿದ ದರಕಿಂತ ಹೆಚ್ಚಿನ ದರ ನೀಡಬೇಕಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಸಾರ್ವಜನಿಕ ವಿತರಣಾ ಪದ್ಧತಿ ಮೂಲಕ ಪ್ರತಿ ಕೆಜಿಗೆ 30ರೂ. ನೀಡುತ್ತಿದೆ. ಗುಣಮಟ್ಟದ ಅಕ್ಕಿ ಪೂರೈಕೆಗೆ 34 ರೂಪಾಯಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇರುವ ಹಣದಲ್ಲಿಯೇ ಗುಣಮಟ್ಟದ ಅಕ್ಕಿ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದ್ದಾರೆ. ಗುಣಮಟ್ಟದ ಆಹಾರ ಸಾಮಗ್ರಿ ಪೂರೈಕೆ ಮಾಡುವಂತೆ ಆಹಾರ ಇಲಾಖೆಗೆ ಮನವಿ ಮಾಡಲಾಗಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಶಾಲೆಗಳಲ್ಲಿ ಮಕ್ಕಳ ಬಿಸಿಯೂಟದಲ್ಲಿ ಪೌಷ್ಟಿಕಾಂಶ ಹೆಚ್ಚಳ ಜೊತೆಗೆ ಗುಣಮಟ್ಟ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.