
ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಐದು ವಾರ್ಡ್ಗಳಲ್ಲಿ ನಾಲ್ಕು ವಾರ್ಡ್ ಗಳಲ್ಲಿ ಎಎಪಿ ಜಯಭೇರಿ ಬಾರಿಸಿದೆ. ಈಶಾನ್ಯ ದೆಹಲಿಯ ಚೌಹಾನ್ ಬಂಗಾರ್ ವಾರ್ಡ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಈ ಗೆಲುವನ್ನು ಎಎಪಿ ಸದಸ್ಯರು ಸಂಭ್ರಮಿಸುತ್ತಿದ್ದಾರೆ. ಕೆಲಸ ಮುಗಿದಿದೆ, ಜೈ ಶ್ರೀ ರಾಮ್ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗ್ತಿದ್ದಾರೆ. ಎಂಸಿಡಿ ಉಪಚುನಾವಣೆಯ 5 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಗಳು. ಬಿಜೆಪಿಯ ಆಡಳಿತದಿಂದ ದೆಹಲಿಯ ಜನರು ದುಃಖಿತರಾಗಿದ್ದಾರೆ. ಮುಂದಿನ ಎಂಸಿಡಿ ಚುನಾವಣೆಯಲ್ಲಿ ಸಾರ್ವಜನಿಕರು ಪ್ರಾಮಾಣಿಕವಾಗಿ ಕೆಲಸ ಮಾಡುವ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಆರಿಸಲಿದ್ದಾರೆಂದು ಮನೀಶ್ ಸಿಸೋಡಿಯಾ ಟ್ವಿಟ್ ಮಾಡಿದ್ದಾರೆ.
ಈ ಚುನಾವಣೆಯನ್ನು ಮುಂದಿನ ವರ್ಷ 2022 ರಲ್ಲಿ ನಡೆಯಲಿರುವ ಎಂಸಿಡಿ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದವು.