ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ವೇಳಾಪಟ್ಟಿ ಮಾದರಿ ವಿಸ್ತರಣೆ ಮಾಡಲಾಗುವುದು.
ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಈಗಾಗಲೇ ಏಕರೂಪ ವೇಳಾಪಟ್ಟಿ ಜಾರಿಯಲ್ಲಿದ್ದು, ಈ ಮಾದರಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪರೀಕ್ಷಾ ವೇಳಾಪಟ್ಟಿ, ಮೌಲ್ಯಮಾಪನ ಪದ್ಧತಿ ಮತ್ತು ಪ್ರತಿ ಕೋರ್ಸ್ ಗಳ ಶುಲ್ಕ ನಿಗದಿಗೆ ವಿಸ್ತರಿಸಲಾಗುತ್ತದೆ.
ಉನ್ನತ ಶಿಕ್ಷಣ ಇಲಾಖೆ ನೀಡಿದ ವೇಳಾಪಟ್ಟಿಯ ಪ್ರಕಾರವೇ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು. ಕೋರ್ಸುಗಳಿಗೆ ಸರ್ಕಾರ ನಿಗದಿ ಪಡಿಸಿದ ಶುಲ್ಕ ಪಡೆದುಕೊಳ್ಳಬೇಕು. ಅಲ್ಲದೆ, ಉನ್ನತ ಶಿಕ್ಷಣ ಇಲಾಖೆ ಸೂಚಿಸುವ ರೀತಿಯಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡ ಬೋಧಕರ ಅರ್ಹತೆ, ಸಂಭಾವನೆ, ಭತ್ಯೆಗಳನ್ನು ನೀಡಬೇಕು.
ವಿಶ್ವವಿದ್ಯಾಲಯಗಳ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಸಹಿತ ಏಕರೂಪ ಪರೀಕ್ಷೆ ವೇಳಾಪಟ್ಟಿ, ಶುಲ್ಕ ವ್ಯವಸ್ಥೆ, ಮೌಲ್ಯಮಾಪನ ಪದ್ದತಿ ಜಾರಿಗೊಳಿಸುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ವೈ.ಎಸ್. ಸಿದ್ದೇಗೌಡ ನೇತೃತ್ವದ 13 ಸದಸ್ಯರ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಈ ವರದಿ ಅನುಷ್ಠಾನಕ್ಕೆ ಸಮ್ಮತಿ ಸೂಚಿಸಿದ್ದು, ಕೆಲ ಬದಲಾವಣೆಗಳೊಂದಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.