ಬೆಂಗಳೂರು: ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಹಾಗೂ ಕಾಮೆಡ್ -ಕೆ ಕೋಟಾ ಸೀಟುಗಳ ಪ್ರವೇಶ ಶೇಕಡ 10ರಷ್ಟು ಹೆಚ್ಚಳವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಮತನಾಡಿದ ಸಚಿವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶುಲ್ಕ ಹೆಚ್ಚಳ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಮೊದಲು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘಟನೆಗಳೊಂದಿಗೆ ಚರ್ಚಿಸಿ ಶುಲ್ಕ ಹೆಚ್ಚಳ ನಿರ್ಧಾರ ಮಾಡಲಾಗಿದೆ. ನಿಯಮಾನುಸಾರ ಶುಲ್ಕ ಹೆಚ್ಚಳ ಮಾಡಿದ್ದು, ಇದನ್ನು ಮತ್ತೆ ಪರಿಷ್ಕರಿಸುವ ಅಥವಾ ಕಡಿಮೆ ಮಾಡುವ, ಹಿಂಪಡೆಯುವ ಪ್ರಶ್ನೆ ಇಲ್ಲ. ಶೇಕಡ 10 ರಷ್ಟು ಶುಲ್ಕ ಹೆಚ್ಚಳ ಅನುಸಾರ ಪರಿಷ್ಕೃತ ಶುಲ್ಕದ ಮಾಹಿತಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಶುಲ್ಕ 64,686 ರೂ.(ವರ್ಗ 1) 71,896 ರೂ.(ವರ್ಗ2) ಇದ್ದು, ಇದು ಶೇ. 10 ರಷ್ಟು ಹೆಚ್ಚಳವಾಗಿ ಕ್ರಮವಾಗಿ 71,155 ರೂ., 78,344 ರೂ. ಆಗಲಿದೆ.
ಕಾಮೆಡ್ –ಕೆ ಸೀಟುಗಳ ಪ್ರವೇಶ ಶುಲ್ಕ 1,58,123 ರೂ.(ವರ್ಗ 1), 2,22,156 ರೂ.(ವರ್ಗ 2) ಶುಲ್ಕವಿದ್ದು, ಶೇ. 10 ರಷ್ಟು ಹೆಚ್ಚಳವಾಗಿ ಕ್ರಮವಾಗಿ 1,73,895 ರೂ., 2,44,372 ರೂ. ಆಗಲಿದೆ.
53,248 ಸೀಟುಗಳು ಸರ್ಕಾರಿ ಕೋಟಾದಡಿ ಸಿಇಟಿ ಅಭ್ಯರ್ಥಿಗಳಿಗೆ ಹಂಚಿಕೆಯಾಗಲಿದ್ದು, ಕಾಮೆಡ್ –ಕೆ ಮೂಲಕ 25,171 ಸೀಟು, ಮ್ಯಾನೇಜ್ಮೆಂಟ್ ಕೋಟಾದಡಿ 33,463 ಇಂಜಿನಿಯರಿಂಗ್ ಸೀಟುಗಳು ಪ್ರವೇಶಕ್ಕೆ ಲಭ್ಯವಿವೆ ಎಂದು ಹೇಳಲಾಗಿದೆ.