ನವದೆಹಲಿ: ಕೊರೋನಾ ಹಾಗೂ ಯುದ್ಧದ ಕಾರಣದಿಂದಾಗಿ ಉಕ್ರೇನ್, ಚೀನಾ ಮತ್ತು ಫಿಲಿಪೈನ್ಸ್ ನಿಂದ ದೇಶಕ್ಕೆ ಮರಳಿದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಎರಡು ಪ್ರಯತ್ನಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಯುದ್ಧಪೀಡಿತ ಉಕ್ರೇನ್ ದೇಶದಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪರೀಕ್ಷೆ ಉತ್ತೀರ್ಣರಾಗಲು ಒಂದು ಬಾರಿ ಅವಕಾಶ ನೀಡುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ಯಾವುದೇ ಕಾಲೇಜಿಗೆ ನೋಂದಣಿಯಾಗದೆ ಎಂಬಿಬಿಎಸ್ ಭಾಗ -1 ಮತ್ತು ಭಾಗ -2 ಪರೀಕ್ಷೆಗಳನ್ನು ಪಾಸ್ ಮಾಡಲು ಅವಕಾಶ ನೀಡಲಾಗುವುದು. ಭಾರತದ ಎಂಬಿಬಿಎಸ್ ಪಠ್ಯಕ್ರಮದ ಅನುಸಾರ ಪರೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಕಾರ ಅಂತಹ ವಿದ್ಯಾರ್ಥಿಗಳು ಎರಡು ವರ್ಷಗಳ ಕಡ್ಡಾಯ ಇಂಟರ್ನ್ ಶಿಪ್ ಪೂರ್ಣಗೊಳಿಸಬೇಕು. ಮೊದಲ ವರ್ಷ ಉಚಿತವಾಗಿ ಸೇವೆ ಸಲ್ಲಿಸಬೇಕಿದ್ದು, ಎರಡನೇ ವರ್ಷ ಸ್ಟೈಪೆಂಡ್ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಸುಮಾರು 18000 ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಮರಳಿದ್ದರು. ಅವರ ಶಿಕ್ಷಣ ಪೂರ್ಣಗೊಳ್ಳದ ಕಾರಣ ತ್ರಿಶಂಕು ಸ್ಥಿತಿಗೆ ಸಿಲುಕಿದ್ದು, ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ವಿಶೇಷ ಸಮಿತಿ ರಚಿಸಿತ್ತು.