ಸಂಕ್ರಾಂತಿ ಸಮೀಪಿಸುತ್ತಿದ್ದಂತೆ, ರೈತಳಾಗಿ ಮಾರ್ಪಟ್ಟಿರುವ ಎಂಬಿಎ ಪದವೀಧರೆ ಕಾರ್ಪೊರೇಟ್ ಕಚೇರಿಗಳಿಗೆ ಸ್ವದೇಶಿ ಹಾಗೂ ಸಾವಯವ ಹಣ್ಣುಗಳ ಬುಟ್ಟಿಯನ್ನ ಮಾರುತ್ತಿದ್ದಾರೆ.
ಪ್ರಸ್ತುತ ಸ್ಕೈಯೋ ಫಾರ್ಮ್ಸ್ ನ ಸಂಸ್ಥಾಪಕಿ ಆಗಿರೊ ಉಷಾರಾಣಿ ವಿನಯ್ ಹಲವಾರು ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಆದರೆ ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ, ಅವರು ಕೃಷಿಯತ್ತ ಆಕರ್ಷಿತರಾದರು. ಕುಣಿಗಲ್ ತಾಲೂಕಿನ ಯಲಗಲವಾಡಿ ಎಂಬ ತನ್ನ ಹಳ್ಳಿಯಲ್ಲಿ ಜಮೀನು ಖರೀದಿಸಿ ಕೃಷಿ ಆರಂಭಿಸಿದರು.
ಲಾಕ್ ಡೌನ್ ಸಮಯದಲ್ಲಿ ನಾವು ನಮ್ಮ ಹಳ್ಳಿಗೆ ಮರಳಿದ್ದೆವು, ಆಗ ನನ್ನಲ್ಲಿ ಕೃಷಿ ಮಾಡುವ ಆಸೆ ಚಿಗುರಿತು. ನಮ್ಮಳ್ಳಿಯಲ್ಲೆ ಭೂಮಿಯನ್ನು ನೋಡಿ, ಅದನ್ನು ಖರೀದಿಸಿ ಕೃಷಿ ಪ್ರಾರಂಭಿಸಿದೆ ಎಂದು ಉಷಾ ಹೇಳಿದ್ದಾರೆ. ಒಂದೂವರೆ ವರ್ಷದಿಂದ ಈ ಫಾರ್ಮ್ ನಡೆಯುತ್ತಿದ್ದು ಉಷಾ ಪೇರಲ, ಪಪ್ಪಾಯಿ, ಬಾಳೆ, ಮಾವು ಸೇರಿದಂತೆ ಸುಮಾರು 15 ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅವರು ಕುರಿಗಳನ್ನು ಸಹ ಸಾಕುತ್ತಿದ್ದು, ಮರುಬಳಕೆ ಪದ್ಧತಿ ಅಳವಡಿಸಿಕೊಂಡು ಅತಿ ಕಡಿಮೆ ನೀರಿನಲ್ಲಿ ಮೀನು ಸಾಕಣೆ ಸಹ ಮಾಡುತ್ತಿದ್ದಾರೆ. ಕುರಿ ಮತ್ತು ತಿಲಾಪಿಯಾ ತ್ಯಾಜ್ಯವನ್ನು ಗೊಬ್ಬರವಾಗಿ ಮರುಬಳಕೆ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ಗಳಿಸುತ್ತಿದ್ದಾರೆ.
ಈ ಹಬ್ಬದ ಸಂದರ್ಭದಲ್ಲಿ ಕಾರ್ಪೊರೇಟ್ ಕಚೇರಿಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ತಮ್ಮ ಉತ್ಪನ್ನಗಳನ್ನ ವಿಭಿನ್ನವಾಗಿ ಮಾರಾಟ ಮಾಡುತ್ತಿರುವ ಉಷಾರಾಣಿ, ಬುಟ್ಟಿಯಲ್ಲಿ ವಿವಿಧ ಹಣ್ಣುಗಳನ್ನ ತುಂಬಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಬುಟ್ಟಿಯ ಬೆಲೆ ಸುಮಾರು 500 ರೂ., ಒಂದು ಬುಟ್ಟಿಯಲ್ಲಿ 2 ಕೆಜಿ ಬಾಳೆಹಣ್ಣು ಮತ್ತು ಪಪ್ಪಾಯಿ, ಒಂದು ಕೆಜಿ ಪೇರಲ ಮತ್ತು ಮೋಸಂಬಿ, ಎರಡು ತೆಂಗಿನಕಾಯಿ ಮತ್ತು ಕಬ್ಬು ಇದೆ. ಎಂಬಿಎ ಓದಿರುವ ಉಷಾರಾಣಿಯವರ ಸಣ್ಣ ಪ್ರಯತ್ನ ಈಗ ದೊಡ್ಡದಾಗಿ ಬೆಳೆದಿದೆ.