ಅಹಮದಾಬಾದ್ ಐಐಎಂನಲ್ಲಿ ಎಂಬಿಎ ಮಾಡಬೇಕೆಂಬ ಕನಸಿಗೆ ಗುಡ್‌ಬೈ ಹೇಳುವುದು 21 ವರ್ಷದ ಪ್ರಫುಲ್ ಬಿಲ್ಲೋರ್‌ಗೆ ಕಠಿಣ ನಿರ್ಧಾರವೇ ಆಗಿತ್ತು. ಆದರೆ ತಮ್ಮ ನಿರ್ಧಾರ ಸರಿ ಎಂದು ಸಾಬೀತುಪಡಿಸುವ ಮಟ್ಟದಲ್ಲಿ ಪ್ರಫುಲ್ ಮೂರು ಕೋಟಿ ರೂ. ಮೌಲ್ಯದ ಉದ್ಯಮ ಸಾಮ್ರಾಜ್ಯವೊಂದರ ಮೇಲೆ ಕುಳಿತಿದ್ದಾರೆ.
2017ರಿಂದ ಚಹಾ ಮಾರುವ ಉದ್ಯಮಕ್ಕೆ ಕಾಲಿಟ್ಟ ಮಧ್ಯ ಪ್ರದೇಶ ಮೂಲದ ಪ್ರಫುಲ್ ಎಂಬಿಎ ಪದವೀಧರರಿಗೆ ದೊಡ್ಡ ಸಂಬಳ ಸಿಗುತ್ತದೆ ಎಂದು ತಾವೂ ಸಹ ಅಹಮದಾಬಾದ್ ಐಐಎಂನಲ್ಲಿ ಎಂಬಿಎ ಮಾಡುವ ಆಸೆ ಇಟ್ಟುಕೊಂಡಿದ್ದರು. ವಾಣಿಜ್ಯಶಾಸ್ತ್ರದಲ್ಲಿ ಪದವಿ ಮಾಡುವ ವೇಳೆ ಆಮ್‌ವೇ ಸೇಲ್ಸ್‌ಮನ್ ಆಗಿ ತಿಂಗಳಿಗೆ 25,000 ರೂ.ಗಳನ್ನು ಸಂಪಾದನೆ ಮಾಡುತ್ತಿದ್ದ ಪ್ರಫುಲ್, ಕ್ಯಾಟ್ ಪರೀಕ್ಷೆ ಪಾಸ್ ಮಾಡಲಾಗದ ಕಾರಣ ಎಂಬಿಎ ಕನಸಿಗೆ ಎಳ್ಳುನೀರು ಬಿಟ್ಟರು.
ಇಂಗ್ಲಿಷ್ ಮಾತನಾಡುವ ಕೋರ್ಸ್‌ಗೆ ಸೇರಿಕೊಂಡರೂ ಪ್ರಫುಲ್‌ಗೆ ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಎಂಬಿಎ ಮಾಡಲು ಸೀಟು ಸಿಗಲಿಲ್ಲ. 2017ರಲ್ಲಿ ತಮ್ಮ ಎಂಬಿಎ ಐಡಿಯಾ ಕೈಬಿಟ್ಟ ಪ್ರಫುಲ್, ತಮ್ಮೂರನ್ನೆಲ್ಲಾ ಸುತ್ತಾಡಿಕೊಂಡು ತಮ್ಮದೇ ಮಟ್ಟದಲ್ಲಿ ಏನನ್ನಾದರೂ ಮಾಡಲು ಚಿಂತಿಸಲು ಶುರುವಿಟ್ಟುಕೊಂಡರು. ಮೊದಲಿಗೆ ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಫುಲ್ ದಿನಕ್ಕೆ 300 ರೂ.ಗಳನ್ನು ಸಂಪಾದನೆ ಮಾಡುತ್ತಿದ್ದರು.
ಮೂರು ತಿಂಗಳು ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡಿದ ಬಳಿಕ ತಮ್ಮದೇ ಸ್ವಂತದ್ದು ಎಂದು ಏನನ್ನಾದರೂ ಮಾಡಲು ನಿರ್ಧರಿಸಿದ ಪ್ರಫುಲ್, ಸಣ್ಣದೊಂದು ಟೀ ಅಂಗಡಿ ಆರಂಭಿಸಿದರು. ಇದಕ್ಕೆಂದು ತಂದೆಯಿಂದ 8000 ರೂ.ಗಳ ಸಾಲ ಪಡೆದ ಪ್ರಫುಲ್ ’ಎಂಬಿಎ ಚಾಯ್‌ವಾಲಾ’ ಎಂಬ ಟೀ ಸ್ಟಾಲ್ ಆರಂಭಿಸಿದರು.
ತಮ್ಮ ವ್ಯಾಪಾರಕ್ಕೆ ಒಂದು ಭಿನ್ನವಾದ ಟ್ವಿಸ್ಟ್ ಕೊಟ್ಟ ಪ್ರಫುಲ್, ಚಹಾವನ್ನು ಮಣ್ಣಿನ ಕುಡಿಕೆಯಲ್ಲಿ ಕೊಡುತ್ತಿದ್ದದ್ದಲ್ಲದೇ, ಜೊತೆಯಲ್ಲಿ ಟೋಸ್ಟ್ ಒಂದನ್ನು ಸೇರಿಸಿ ಈ ಕಾಂಬೋವನ್ನು 30 ರೂ.ಗೆ ಮಾರಲು ಆರಂಭಿಸಿದರು.
ನೋಡನೋಡುತ್ತಲೇ ದಿನವೊಂದಕ್ಕೆ 10-11 ಸಾವಿರ ಕಪ್ ಚಹಾ ಮಾರಾಟ ಮಾಡುತ್ತಿದ್ದ ಪ್ರಫುಲ್‌ಗೆ ಇಂಗ್ಲಿಷ್ ಮೇಲಿನ ಹಿಡಿತ ಸಹಾಯ ಮಾಡುತ್ತಿತ್ತು. ಗೂಂಡಾಗಳು ಹಾಗೂ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬೆದರಿಕೆಯ ನಡುವೆಯೂ ಛಲಗುಂದದೇ ಮುನ್ನುಗಿದ ಪ್ರಫುಲ್, ರಸ್ತೆ ಬದಿಯ ಚಹಾ ಅಂಗಡಿಯಿಂದ ಆರಂಭಿಸಿ ಇಂದು ಕೆಫೆಗಳ ಚೈನ್ ಅನ್ನೇ ನಡೆಸುತ್ತಿದ್ದಾರೆ.