ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ಅಲ್ಲದೇ, ಶತಕ ಸಿಡಿಸಿ ಮಿಂಚುತ್ತಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿರುವ ಮಯಾಂಕ್ ಅಗರ್ವಾಲ್, ಉತ್ತಮವಾಗಿ ಆಡುತ್ತಿದ್ದಾರೆ. ಶುಭಮನ್ ಗಿಲ್ ರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ 80 ರನ್ ಗಳ ಜೊತೆಯಾಟ ನೀಡಿದ್ದಾರೆ. ಆನಂತರ ಬಂದ ಪೂಜಾರ ಹಾಗೂ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತ ತಂಡ ಕುಸಿಯುವಂತೆ ಮಾಡಿದರು. ಆದರೆ, ಇನ್ನೊಂದೆಡೆ ಗಟ್ಟಿಯಾಗಿ ಕ್ರೀಜ್ ಗೆ ನಿಂತ ಮಯಾಂಕ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
ಮಯಾಂಕ್ ಅಗರ್ವಾಲ್ 196 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದಾರೆ. ಇದರಲ್ಲಿ 13 ಬೌಂಡರಿ ಹಾಗೂ ಮೂರು ಸಿಕ್ಸರ್ ಇವೆ. ಇದು ಮಯಾಂಕ್ ಅವರ ಟೆಸ್ಟ್ ಜೀವನದ ನಾಲ್ಕನೇ ಶತಕವಾಗಿದೆ. ಭಾರತೀಯ ಕಾಲಮಾನ 5.30ರ ವೇಳೆಗೆ ಭಾರತ ತಂಡವು 69 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು 213ರನ್ ಗಳಿಸಿದೆ. ಮಯಾಂಕ್ ಅಗರ್ವಾಲ್ 241 ಎಸೆತಗಳನ್ನು ಎದುರಿಸಿ 112 ರನ್ ಸಿಡಿಸಿ ಆಡುತ್ತಿದ್ದಾರೆ. ಇವರಿಗೆ ಸಾಥ್ ನೀಡಿರುವ ವೃದ್ಧಿಮಾನ್ ಸಹಾ 53 ಎಸೆತಗಳನ್ನು ಎದುರಿಸಿ 25 ರನ್ ಗಳೊಂದಿಗೆ ಬ್ಯಾಟ್ ಬೀಸುತ್ತಿದ್ದಾರೆ.