ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ.
ಕಳೆದ ಮಾರ್ಚ್ ನಲ್ಲಿ 11,307 ಪೌರಕಾರ್ಮಿಕರ ನೇಮಕಾತಿಗೆ ಬಿಬಿಎಂಪಿ ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮತ್ತು ಆಡಳಿತಾತ್ಮಕ ಕಾರಣದಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 15ರ ವರೆಗೆ ವಿಸ್ತರಿಸಲಾಗಿದೆ.
ಬಿಬಿಎಂಪಿಯ 14,980 ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಸರ್ಕಾರ ಹೇಳಿತ್ತು. ಇದರಲ್ಲಿ ಮೊದಲ ಹಂತದಲ್ಲಿ ಪಾಲಿಕೆಯ 3673 ಪೌರಕಾರ್ಮಿಕರ ಹುದ್ದೆಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಪೌರಕಾರ್ಮಿಕ ಸಂಘಟನೆ ಮುಖಂಡರು ಎರಡನೇ ಹಂತದ 11,307 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಏಕಕಾಲಕ್ಕೆ ಎರಡು ಹಂತದ ಅಂತಿಮಪಟ್ಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎರಡನೇ ಹಂತದ 11,307 ಪೌರಕಾರ್ಮಿಕರ ಕಾಯಮಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇವುಗಳಲ್ಲಿ 10,402 ಹುದ್ದೆ ಉಳಿಕೆ ಮೂಲ ವೃಂದಕ್ಕೆ, ಉಳಿದ 905 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿವೆ.
ಅರ್ಜಿ ಹಾಕಲು ಕನಿಷ್ಠ ಎರಡು ವರ್ಷ ನೇರ ಪಾವತಿ, ದಿನಗೂಲಿ ಸೇರಿದಂತೆ ವಿವಿಧ ಆಧಾರದಲ್ಲಿ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿರಬೇಕು. ಭಾರತೀಯ ಪ್ರಜೆಯಾಗಿರಬೇಕು, 55 ವರ್ಷ ಮೀರಿವಂತಿಲ್ಲ, ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಕಡ್ಡಾಯವಾಗಿ ಮಾತನಾಡಲು ತಿಳಿದಿರಬೇಕು. ದೈಹಿಕ ದೃಢತೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಲಾಗಿದೆ.