ಬೆಂಗಳೂರು: ಭಾಷಾ ಬಳಕೆ ಅನುಕೂಲತೆಗೆ ಸಂಬಂಧಿಸಿದ ವಿಷಯ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಡಳಿತದಲ್ಲಿ ಕನ್ನಡ ಬಗ್ಗೆ ಸರ್ಕಾರಕ್ಕೆ ಸೂಚಿಸಲು ನಿರಾಕರಿಸಿದೆ.
ಕನ್ನಡ ಭಾಷೆಗೆ ಸರ್ಕಾರದ ಇಲಾಖೆಗಳು ಮತ್ತು ಅಧಿಕಾರಿಗಳು ಆದ್ಯತೆ ನೀಡಬೇಕು. ರಾಜ್ಯ ಸರ್ಕಾರದ ಪ್ರಾಧಿಕಾರಗಳು ಮತ್ತು ಅಧಿಕಾರಿಗಳು ಸಂವಹನ ಮತ್ತು ಎಲ್ಲಾ ಹಂತದ ಆಡಳಿತ ವ್ಯವಹಾರಗಳಲ್ಲಿ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕನ್ನಡ ಭಾಷೆಯನ್ನು ಬಳಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಲೋಕಾಯುಕ್ತದಲ್ಲಿ ಎಲ್ಲಾ ಹಂತದ ಆಡಳಿತ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗಿಯ ಪೀಠದಲ್ಲಿ ನಡೆದಿದ್ದು, ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ಮನವಿ ಪರಿಗಣಿಸಲು ನಿರಾಕರಿಸಿದ ನ್ಯಾಯಪೀಠ, ಮೂಲಭೂತವಾಗಿ ಸರ್ಕಾರಿ ವ್ಯವಹಾರಗಳು ಯಾವ ಭಾಷೆ ಬಳಸಬೇಕು ಎಂಬುವುದು ನೀತಿ ನಿರ್ಣಯ ಮತ್ತು ಅನುಕೂಲತೆಯ ವಿಷಯವಾಗಿದೆ. ಈ ಅಂಶಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಲು ಅರ್ಹವಾಗುವುದಿಲ್ಲ ಎಂದು ಹೇಳಿದೆ.
ನಾವು ಆಂಗ್ಲ ಭಾಷೆಯ ವಿರೋಧಿಗಳಲ್ಲ. ಆದರೆ, ಲೋಕಾಯುಕ್ತ ಸಂಸ್ಥೆಯ ಎಲ್ಲಾ ಕಾರ್ಯ ಚಟುವಟಿಕೆಗಳು, ವಿಚಾರಗಳು ಗ್ರಾಮೀಣ ಭಾಗದ ಜನ ತಿಳಿದುಕೊಳ್ಳುವಂತಿರಬೇಕು. ಹಾಗಾಗಿ ಲೋಕಾಯುಕ್ತ ಸಂಸ್ಥೆಯ ಆದೇಶಗಳು, ನೋಟಿಸ್ ಸೇರಿ ಎಲ್ಲಾ ಪ್ರಕ್ರಿಯೆಯನ್ನು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.