ತ್ರಿಶೂರ್: ಬಿಜೆಪಿ ಕೇರಳ ಸಂಸದ ಸುರೇಶ್ ಗೋಪಿ ಅವರು ಮೋದಿ 3.0 ಸರ್ಕಾರದಲ್ಲಿನ ತಮ್ಮ ಸಂಪುಟ ಸ್ಥಾನವನ್ನು ಬಿಟ್ಟುಕೊಡಲು ಯೋಜಿಸಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದು, ಈ ಕುರಿತಾಗಿ ಸುರೇಶ್ ಗೋಪಿ ಅವರು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸಚಿವ ಸ್ಥಾನ ತೊರೆಯುವ ಕುರಿತಾದ ವರದಿಗಳನ್ನು ತಳ್ಳಿಹಾಕಿದ್ದಾರೆ. ಮೋದಿ ಸರ್ಕಾರದ ಸಚಿವ ಸಂಪುಟಕ್ಕೆ ನಾನು ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿಯನ್ನು ಬಿತ್ತರಿಸುತ್ತಿವೆ, ಇದು ಸಂಪೂರ್ಣ ತಪ್ಪು, ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವು ಕೇರಳ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ನಟ ಕಮ್ ರಾಜಕಾರಣಿ ಸುರೇಶ್ ಗೋಪಿ ಅವರು ಗೆದ್ದರೆ ಕೇಂದ್ರ ಸಚಿವರಾಗುವುದಾಗಿ ಭರವಸೆ ನೀಡುವ ಮೂಲಕ ಮತ ಕೇಳಿದ್ದರು. 2024 ರ ಸಂಸತ್ತಿನ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಗೆದ್ದು ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದರಾಗಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. 65 ವರ್ಷದ ಸುರೇಶ್ ಗೋಪಿ ಅವರು ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರಿಮಂಡಲದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.