ತಮ್ಮ ಗಂಡನಾಗುವವನು ಹೀಗೆಯೇ ಇರಬೇಕು ಎಂದು ಹಲವು ಯುವತಿಯರು ಕನಸು ಕಾಣುವುದು ಸಹಜ. ಅದಕ್ಕಾಗಿಯೇ ಕೆಲವೊಮ್ಮೆ ತಮ್ಮಿಷ್ಟದ ಗಂಡಿಗಾಗಿ ಜಾಹೀರಾತು ನೀಡುವುದೂ ಇದೆ. ಆದರೆ ಇಲ್ಲಿ ನೀಡಿರುವ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹಂಗಾಮ ಸೃಷ್ಟಿಸಿದೆ. ಯುವತಿಯ ಬೇಡಿಕೆ ಕಂಡ ನೆಟ್ಟಿಗರು ಹುಬ್ಬೇರಿಸಿದ್ದಾರೆ.
1992 ರ ಜೂನ್ ಗಿಂತ ಮೊದಲು ಜನಿಸಿರುವ ಗಂಡು ತನಗೆ ಬೇಕು ಎಂದಿರುವ ಯುವತಿಯ ಮುಂದಿನ ಬೇಡಿಕೆಗಳು ಮಾತ್ರ ಭಾರಿ ಸುದ್ದಿಯಾಗಿದೆ. ಈಕೆ ಜಾಹೀರಾತಿನಲ್ಲಿ, ತನ್ನ ಗಂಡನಾಗುವವ ಎಲ್ಲೆಲ್ಲಿ ಓದಿರಬೇಕು, ಯಾವ್ಯಾವ ಪದವಿ ಪಡೆದಿರಬೇಕು ಎನ್ನುವುದನ್ನು ಹೀಗೆ ಹೇಳಿದ್ದಾರೆ.
ವರನು ಎಂಬಿಎ, ಎಂಟೆಕ್, ಎಂಎಸ್, ಪಿಜಿಡಿಎಂ, ಎಂಜಿನಿಯರಿಂಗ್ ಪದವಿ ಹೊಂದಿರಬೇಕು. ಅದನ್ನೂ ಆತ ಐಐಟಿ- ಬಾಂಬೆ, ಮದ್ರಾಸ್, ಕಾನ್ಪುರ್, ದೆಹಲಿ, ರೂರ್ಕಿ, ಖರಗ್‌ಪುರ, ಗುವಾಹಟಿ ಸೇರಿದಂತೆ ಒಂದನೇ ಶ್ರೇಣಿಯ ಕಾಲೇಜಿನಲ್ಲಿ ಕಲಿತಿರಬೇಕು. ಎನ್ಐಟಿ ಪದವೀಧರನಾಗಿದ್ದರೆ ಅದನ್ನು ಆತ ಕೋಲ್ಕತಾ, ದೆಹಲಿ, ಕುರುಕ್ಷೇತ್ರ, ಜಲಂಧರ್, ತಿರುಚಿ, ಸುರತ್ಕಲ್, ವಾರಂಗಲ್. ಐಐಟಿ ಹೈದರಾಬಾದ್, ಅಲಹಾಬಾದ್, ದೆಹಲಿ ಅಥವಾ ಬೆಂಗಳೂರಿನಲ್ಲಿ ಕಲಿತಿರಬೇಕು.
ಈ ವಿದ್ಯಾರ್ಹತೆ ಹೊರತಾಗಿ ಆತ ಐಐಎಸ್ಸಿ ಬೆಂಗಳೂರು, ಬಿಐಟಿಎಸ್ ಪಿಲಾನಿ, ಹೈದರಾಬಾದ್, ಡಿಟಿಯು, ಎನ್ಎಸ್ಐಟಿ ಮತ್ತು ಜಾಧವ್‌ಪುರ ವಿಶ್ವವಿದ್ಯಾಲಯ (ಕೋಲ್ಕತಾ) ಇಲ್ಲಿ ಎಂಬಿಎ ವ್ಯಾಸಂಗ ಮಾಡಿರಬೇಕು. ಐಐಎಂ ನಲ್ಲಿ ಕಲಿತಿರುವುದಾದರೆ ಅದು ಅಹಮದಾಬಾದ್, ಬೆಂಗಳೂರು, ಕೋಲ್ಕತಾ, ಇಂದೋರ್, ಲಖನೌ, ಕೋಯಿಕ್ಕೋಡ್‌ನಿಂದ ಆಗಿರಬೇಕು…… ಹೀಗೆ ಉನ್ನತ ಕಾಲೇಜುಗಳಲ್ಲಿ ತಮ್ಮ ಪತಿಯಾಗುವವ ಕಲಿತಿರಬೇಕು ಎಂದು ತಿಳಿಸಿದ್ದಾರೆ.
ಇನ್ನು ಇಂಥ ಸಂಸ್ಥೆಯಲ್ಲಿ ಕಲಿತರೆ ಸಾಲದು, ತನ್ನ ಗಂಡನಾಗುವವ ವಾರ್ಷಿಕವಾಗಿ 30 ಲಕ್ಷ ರೂಪಾಯಿ (ಅಂದರೆ ತಿಂಗಳಿಗೆ ಎರಡೂವರೆ ಲಕ್ಷ ರೂ.) ಸಂಬಳ ಪಡೆಯಬೇಕು ಎಂದಿದ್ದಾರೆ. ವರನ ಎತ್ತರವು 5’7” ನಿಂದ 6” ನಡುವೆ ಇರಬೇಕು ಎಂದು ಹೇಳಲಾಗಿದೆ. ಈತನ ಕುಟುಂಬವು ಚಿಕ್ಕದಾಗಿರಬೇಕು, ಗರಿಷ್ಠ 2 ಒಡಹುಟ್ಟಿದವರು ಇರಬೇಕು. ವಿದ್ಯಾವಂತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.