
ಈ ಕಾಲಘಟ್ಟದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ವೈವಾಹಿಕ ಸಂಬಂಧ ಏರ್ಪಡುವ ಸಂದರ್ಭದಲ್ಲಂತೂ ಸಾಫ್ಟ್‌ವೇರ್ ಇಂಜಿನಿಯರ್ಗೆ ಮಣೆ ಹಾಕುವುದು ಸಾಮಾನ್ಯ. ಆದರೆ ಅಚ್ಚರಿ ಎಂಬಂತೆ ಇಲ್ಲೊಂದು ವೈವಾಹಿಕ ಜಾಹಿರಾತಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ಗೆ ದೂರ ಇಟ್ಟಿರುವುದು ಕಾಣಿಸಿದೆ.
ಪತ್ರಿಕೆಯ ಜಾಹೀರಾತು ವಾಸ್ತವವಾಗಿ “ಸಾಫ್ಟ್‌ವೇರ್ ಇಂಜಿನಿಯರ್” ಅಲ್ಲದ ವರನನ್ನು ಹುಡುಕುವಂತಿದೆ. ಈ ಪೋಸ್ಟ್ ಅನ್ನು ಉದ್ಯಮಿ ಸಮೀರ್ ಅರೋರಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅದು ಪತ್ರಿಕೆಯೊಂದರಲ್ಲಿನ ವೈವಾಹಿಕ ಜಾಹೀರಾತನ್ನು ಒಳಗೊಂಡಿತ್ತು.
24 ವರ್ಷದ, ವ್ಯವಹಾರದ ಹಿನ್ನೆಲೆಯ ಶ್ರೀಮಂತ ಕುಟುಂಬದ ವಧುವಿಗೆ ವರನನ್ನು ಹುಡುಕುವ ಪ್ರಸ್ತಾಪ ಅದರಲ್ಲಿದ್ದು, ಅದೇ ಜಾತಿಯ ಐಎಎಸ್/ಐಪಿಎಸ್ ಅಥವಾ ವೈದ್ಯ (ಪಿಜಿ) ಅಥವಾ ಕೈಗಾರಿಕೋದ್ಯಮಿ/ಉದ್ಯಮಿ ಆಗಿರುವ ವರನನ್ನು ಬಯಸಿತ್ತು.
“ಸಾಫ್ಟ್‌ವೇರ್ ಎಂಜಿನಿಯರ್ಗಳು ದಯಮಾಡಿ ಕರೆ ಮಾಡಬೇಡಿ” ಎಂದು ಜಾಹೀರಾತು ಕೊನೆಯಲ್ಲಿ ಉಲ್ಲೇಖಿಸಲಾಗಿದೆ. ಜಾಹೀರಾತನ್ನು ಹಂಚಿಕೊಳ್ಳುವಾಗ ಸಮೀರ್ ಅರೋರಾ “ಐಟಿಯ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ” ಎಂದು ಕೆಣಕಿ ಬರೆದ್ದಾರೆ.
ಈ ಪೋಸ್ಟ್ ನಿಸ್ಸಂಶಯವಾಗಿ ನೆಟ್ಟಿಗರ ಗಮನವನ್ನು ಸೆಳೆಯಿತಲ್ಲದೇ, ಕಾಮೆಂಟ್ ಮಾಡಲು ಪ್ರಚೋದಿಸಿದೆ. “ಜಾಹೀರಾತನ್ನು ನೋಡುವಾಗ, ಇಡೀ ದೇಶದ ಭವಿಷ್ಯವು ಅಷ್ಟು ಉತ್ತಮವಾಗಿಲ್ಲ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, “ಐಟಿ ಇಲ್ಲದೆ ಭವಿಷ್ಯವು ಉತ್ತಮವಾಗಿರಲು ಸಾಧ್ಯವಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.