ಅಲಹಾಬಾದ್: ಉತ್ತರ ಪ್ರದೇಶದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯದ ಪಕ್ಕದಲ್ಲಿರುವ ಶಾಹಿ ಈದ್ಗಾ ಸಂಕೀರ್ಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಅಡ್ವೊಕೇಟ್ ಕಮಿಷನರ್ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
“ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯನ್ನು ಅಡ್ವೊಕೇಟ್ ಕಮಿಷನರ್ಗಳಿಂದ ನಡೆಸಬೇಕೆಂದು ನಾವು ಒತ್ತಾಯಿಸಿದ ನಮ್ಮ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಅನುಮೋದಿಸಿದೆ. ಡಿಸೆಂಬರ್ 18ರಂದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಶಾಹಿ ಈದ್ಗಾ ಮಸೀದಿಯ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಅವರು ಹೇಳಿದರು.
ಶ್ರೀ ಕೃಷ್ಣ ಜನ್ಮಭೂಮಿ ಒಡೆತನದ 13.37 ಎಕರೆ ಜಮೀನಿನ ಮಾಲೀಕತ್ವಕ್ಕೆ ಆಗ್ರಹಿಸಿ ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಅವರು ದಾವೆ ಹೂಡಿದ್ದರು. ತನ್ನ ಕಾನೂನು ಮೊಕದ್ದಮೆಯಲ್ಲಿ, ಅಗ್ನಿಹೋತ್ರಿ ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರ ಕೇಶವ್ ದೇವ್ ದೇವಾಲಯದ 13.37 ಎಕರೆ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಮಸೀದಿಯನ್ನು ತೆಗೆದುಹಾಕುವಂತೆ ಮಥುರಾ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
2020 ರಲ್ಲಿ, ಸುಪ್ರೀಂ ಕೋರ್ಟ್ ವಕೀಲ ಮೆಹಕ್ ಮಹೇಶ್ವರಿ ಅವರು ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದ ಪ್ರಕರಣದಲ್ಲಿ ಪಿಐಎಲ್ ಸಲ್ಲಿಸಿದ್ದರು ಮತ್ತು ವಿವಾದಿತ ಆವರಣವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದರು.
ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳ ಕುರಿತು ಸಮೀಕ್ಷೆ ನಡೆಸಿದಾಗ ಅಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ. ಇದೇ ರೀತಿಯಲ್ಲಿ ಶಹಿ ಈದ್ಗಾ ಮಸೀದಿ ಒಳಗೂ ಸಮೀಕ್ಷೆ ನಡೆಸಬೇಕು ಎಂದು ವಿಷ್ಣು ಗುಪ್ತಾ ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದರು.17ನೇ ಶತಮಾನದ ಶಹಿ ಈದ್ಗಾ ಮಸೀದಿಯನ್ನು ಶ್ರೀಕೃಷ್ಣನ ಜನ್ಮಸ್ಥಳದ ಮೇಲೆ ನಿರ್ಮಿಸಲಾಗಿದೆ. ಕಾತ್ರ ಕೇಶವ ದೇವ ದೇವಸ್ಥಾನದಿಂದ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.