
ಅಯೋಧ್ಯೆ ಬಳಿಕ ಮಥುರಾ ಬಿಜೆಪಿಯ ಚುನಾವಣಾ ಕೇಂದ್ರ ಬಿಂದುವಾಗಲಿದೆ ಎಂಬ ಸುಳಿವನ್ನು ಕೇಶವ್ ಪ್ರಸಾದ್ ಮೌರ್ಯ ನೀಡಿದ್ದಾರೆ.
“ಅಯೋಧ್ಯೆ ಹಾಗೂ ಕಾಶಿಯಲ್ಲಿ ಭವ್ಯ ಮಂದಿರದ ನಿರ್ಮಾಣ ಜಾರಿಯಲ್ಲಿದೆ. ಮಥುರಾದ ತಯಾರಿ ನಡೆಯುತ್ತಿದೆ” ಎಂದು ಟ್ವೀಟರ್ನಲ್ಲಿ ಮೌರ್ಯ ಟ್ವೀಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕ ವಿಶ್ವಾಸವನ್ನು ಆಡಳಿತಾರೂಢ ಬಿಜೆಪಿ ಸರ್ಕಾರ ಗಳಿಸಿಕೊಂಡ ಬಳಿಕ ಶ್ರೀಕೃಷ್ಣ ಪರಮಾತ್ಮನದ ಊರಾದ ಮಥುರಾದ ವೈಭವವನ್ನು ಮರಳಿ ಸೃಷ್ಟಿಸಬೇಕೆಂಬ ಕೂಗುಗಳು ಬಹಳ ದಿನಗಳಿಂದ ಸದ್ದು ಮಾಡುತ್ತಿವೆ.
ದೇವಸ್ಥಾನವೊಂದಕ್ಕೆ ಅಂಟಿಕೊಂಡಿರುವ ಮಸೀದಿಯಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಗೋಪಾಲನ ಮೂರ್ತಿ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಥುರಾ ಜಿಲ್ಲಾಡಳಿತವು ಸೆಕ್ಷನ್ 144 ಜಾರಿಗೊಳಿಸಿದ್ದು, ಎಲ್ಲೆಡೆ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಶಾಹಿ ಈದ್ಗಾದಲ್ಲಿ ಡಿಸೆಂಬರ್ 6ರಂದು, ಜಲಾಭಿಷೇಕ ಮಾಡಿ, ಜಾಗವನ್ನು ಶುದ್ಧಿ ಮಾಡಿದ ಬಳಿಕ ಶ್ರೀಕೃಷ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಹಿಂದೂ ಮಹಾಸಭಾದ ನಾಯಕ ರಾಜ್ಯಶ್ರೀ ಚೌಧರಿ ಘೋಷಿಸಿದ್ದರು.
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು.