ಬೆಂಗಳೂರು: ರಾಜ್ಯದ ವಿವಿಧ ಮಠ-ಮಂದಿರ, ದೇವಾಲಯ ಟ್ರಸ್ಟ್ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
182 ಧಾರ್ಮಿಕ ಸಂಸ್ಥೆಗಳಿಗೆ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ. 2019 -20 ಮತ್ತು 2020 – 21 ನೇ ಸಾಲಿನ ಬಜೆಟ್ ನಲ್ಲಿ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಘೋಷಣೆ ಮಾಡಿದ್ದರೂ, ಕಾರಣಾಂತರದಿಂದ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಸಿಎಂ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದಾರೆ.
46 ಮಠ, ಟ್ರಸ್ಟ್ ಗಳಿಗೆ ತಲಾ ಒಂದು ಕೋಟಿ ರೂಪಾಯಿ ನೆರವು ನೀಡಲಾಗುವುದು. 142 ಮಠ, ಧಾರ್ಮಿಕ ಸಂಸ್ಥೆಗಳಿಗೆ 10 ರಿಂದ 50 ಲಕ್ಷ ರೂಪಾಯಿವರೆಗೆ ಅನುದಾನ ನೀಡಲಾಗುವುದು. ಕಂದಾಯ(ಮುಜರಾಯಿ) ಇಲಾಖೆಯಿಂದ ಈ ಕುರಿತಾಗಿ ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.