ಧಾರವಾಡ: ಹೊರಗುತ್ತಿಗೆ ನೌಕರರಿಗೂ ಮಾತೃತ್ವದ ರಜೆ, ಹೆರಿಗೆ ರಜೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ನ ಧಾರವಾಡ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ.
ಎಂ.ಜಿ.ಎಸ್ ಕಮಾಲ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಹೊರಗುತ್ತಿಗೆ ನೌಕರರು ಹೆರಿಗೆ ರಜೆ ಹಾಗೂ ಮಾತೃತ್ವ ರಜೆ ಪಡೆಯಲು ಹಕ್ಕುದಾರರಾಗಿದ್ದಾರೆ ಎಂದು ಆದೇಶ ಹೊರಡಿಸಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಚಾಂದ್ ಬಿ ಬಳಿಗಾರ್ ಎಂಬ ಮಹಿಳೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.
ಚಾಂದ್ ಬಿ ಬಳಿಗಾರ್ ಹೂವಿನಹಡಗಲಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅಕೌಂಟೆಂಟ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2014ರಿಂದ 2023ರವರೆಗೂ ಚಾಂದ್ ಬಿ ಬಳಿಗಾರ್ ಅದೇ ಸಂಸ್ಥೆಯಲ್ಲಿ ಅದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2023ರಲ್ಲಿ ಹೂವಿನಹಡಗಲಿ ಕೃಷಿ ಅಧಿಕಾರಿ ಅವರಿಗೆ ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿ ರಜೆ ಮೇಲೆ ತೆರಳಿದ್ದರು. ಮಾತೃತ್ವ ರಜೆ ಮುಗಿದ ಮರುದಿನವೇ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಅವರು ನಿರ್ವಹಿಸುತ್ತಿದ್ದ ಅಕೌಂಟೆಂಟ್ ಹುದ್ದೆಯನ್ನು ಬೇರೆಯವರಿಗೆ ನೀಡಲಾಗಿತ್ತು. ತಾವು ಈ ಹುದ್ದೆಯಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರುವುದಾಗಿ, ತಮಗೆ ಈ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇರಲಿಲ್ಲ. ಅಂತಿಮವಾಗಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಹಿಳೆ ಪರ ತೀರ್ಪು ಪ್ರಕಟಿಸಿರುವ ಹೈಕೋರ್ಟ್ ಪೀಠ, ಬಾದಿತ ಮಹಿಳೆ ಹೆರಿಗೆ ರಜೆಗೆ ತೆರಳುವಮುನ್ನ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಕಾನೂನು ಬದ್ಧ ನೇಮಕಾತಿಯಾಗುವವರೆಗೂ ಅರ್ಜಿದಾರರಿಗೆ ಕೆಲಸಕ್ಕೆ ಅನುಮತಿಕೊಡಬೇಕು ಎಂದು ಕೃಷಿ ಇಲಾಖೆಗೆ ನಿರ್ದೇಶನ ನೀಡಿದೆ. ಅಲ್ಲದೇ ಅರ್ಜಿದಾರರಿಗೆ ಹಿಂದೆ ಬಾಕಿ ಇರುವ ಎಲ್ಲಾ ವೇತನ ಹಾಗೂ ಪ್ರಕರಣದ ಖರ್ಚಿನ ಸಹಿತ ಹಣ ಪಾವತಿಸುವಂತೆ ಸೂಚಿಸಿದೆ.