ಮಾತೃತ್ವ ಪ್ರಯೋಜನ ಕಾಯ್ದೆಯ ಅಡಿಯಲ್ಲಿ ದತ್ತು ಪಡೆದ ಮಕ್ಕಳು ಮೂರು ತಿಂಗಳಿಗಿಂತ ಚಿಕ್ಕ ವಯಸ್ಸಿನವರಾಗಿದ್ದರೆ ಮಾತ್ರ ಮಾತೃತ್ವ ರಜೆ ನೀಡುವ ಕೇಂದ್ರ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳುಹಿಸಿದೆ.
ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ನೇತೃತ್ವದ ನ್ಯಾಯಪೀಠವು ದತ್ತು ಪಡೆದ ತಾಯಂದಿರಿಗೆ ಈ ಕಾಯ್ದೆಯು ತಾರತಮ್ಯ ಮಾಡುತ್ತಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದಾರೆ. ಹಾಗೂ ಈ ಸಂಬಂಧ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ್ದಾರೆ.
ಹಂಸನಂದಿನಿ ನಂದುರಿ ಎಂಬವರು ಮಾತೃತ್ವ ಪ್ರಯೋಜನ ಕಾಯ್ದೆ, 1961ರ ಸೆಕ್ಷನ್ 5(4)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 12 ವಾರಗಳ ಹೆರಿಗೆ ರಜೆಯ ಪ್ರಯೋಜನವನ್ನು ಪಡೆಯಲು ಮೂರು ತಿಂಗಳ ಮಗುವನ್ನೇ ದತ್ತು ಪಡೆಯಬೇಕು ಎಂಬ ನಿಯಮ ಎಷ್ಟರ ಮಟ್ಟಿಗೆ ಸರಿ ಎಂದು ಅರ್ಜಿದಾರೆ ಪ್ರಶ್ನಿಸಿದ್ದಾರೆ.
ಮೂರು ತಿಂಗಳಿಗೆ ಮೇಲ್ಪಟ್ಟ ಅನಾಥ ಅಥವಾ ಇನ್ಯಾವುದೇ ಮಗುವನ್ನು ದತ್ತು ಪಡೆಯುವ ತಾಯಿಗೆ ಮಾತೃತ್ವ ರಜೆಯ ಪ್ರಯೋಜನ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಈ ನಿಯಮವು ದತ್ತು ಪಡೆದ ಮಗುವಿನ ತಾಯಿ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಿಯ ನಡುವೆ ತಾರತಮ್ಯ ಮಾಡುವಂತಿದೆ ಎಂದು ಹೇಳಿದ್ದಾರೆ.