ಬೆಂಗಳೂರು: ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇಬೇಕು. ಇದು ಜೀವದ ಪ್ರಶ್ನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ವಿಪಕ್ಷಗಳು ಸಹಕಾರ ನೀಡಬೇಕು. ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಬಾಣಂತಿಯರ ಸಾವು ಪ್ರಕರಣ ತೀವ್ರ ದು:ಖತಂದಿದೆ. ಆಸ್ಪತ್ರೆಯಲ್ಲಿ 9 ಜನರಿಗೆ ಸಮಸ್ಯೆಯಾಗಿತ್ತು. ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದರು. ತಕ್ಷಣ ತನಿಖೆ ನಡೆಸಿ ಐವಿ ಫ್ಲೂಯಿಡ್, ರಿಂಗರ್ ಲ್ಯಾಕ್ಟೇಟ್ ದ್ರಾವಣದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈಗ ಐದನೇ ಸಾವು ಸಂಭವಿಸಿರುವುದು ನಿಜಕ್ಕೂ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ಒಂದೇ ಬ್ಯಾಚ್ ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು ಎಂದು ತಿಳಿದುಬಂದಿದೆ. ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು ಎನ್ನಲಾಗಿದೆ. ಆದರೆ ಚೇತರಿಸಿಕೊಳ್ಳುತ್ತಿದ್ದರು. ಈಗಾಗಲೇ ಆಸ್ಪತ್ರೆ ಎಂಡಿಗೆ ನೋಟಿಸ್ ನೀಡಲಾಗಿದೆ. ತನಿಖೆ ನಡೆಯುತ್ತಿದೆ ಎಂದರು.
ಪ್ರಕರಣದ ಬಗ್ಗೆ ನನ್ನ ರಾಜೀನಾಮೆ ಕೇಳಿದರೆ ರಾಜೀನಾಮೆ ನೀಡಲೂ ಸಿದ್ಧ. ನನ್ನ ರಾಜೀನಾಮೆಯಿಂದ ಎಲ್ಲವೂ ಸರಿಯಾಗಲಿದೆ ಎನ್ನುವುದಾದರೆ ನಾನು ಅದಕ್ಕೂ ಸಿದ್ಧನಿದ್ದೇನೆ. ಆದರೆ ಇಂಥಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದರು.
ಬಿಜೆಪಿಯವರು ಲೋಕಾಯುಕ್ತಕ್ಕೆ ದೂರು ನೀಡುವುದಾದರೆ ನೀಡಲಿ. ನನ್ನ ರಾಜೀನಾಮೆಯಿಂದ ಸರಿಯಾಗುವುದಾದರೆ ಅದಕ್ಕೂ ಸಿದ್ಧ ಎಂದರು.