ನವದೆಹಲಿ: ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಸಚಿತ್ರಾ ಸೇನಾನಾಯಕೆ ಅವರನ್ನು ಶ್ರೀಲಂಕಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು 38 ವರ್ಷದ ಸಚಿತ್ರಾ ಸೇನಾನಾಯಕೆನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆರೋಪಗಳ ಬಗ್ಗೆ ಪೊಲೀಸ್ ತನಿಖೆಯ ಸಮಯದಲ್ಲಿ ನ್ಯಾಯಾಲಯವು ಕಳೆದ ತಿಂಗಳು ಸೇನಾನಾಯಕೆ ಅವರ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿತು.2016 ರಲ್ಲಿ ಕೊನೆಯ ಬಾರಿಗೆ ಶ್ರೀಲಂಕಾ ಪರ ಆಡಿದ ಸೇನಾನಾಯಕೆ, 2020 ರಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡಲು ಇಬ್ಬರು ಎಲ್ಪಿಎಲ್ ಆಟಗಾರರ ಮೇಲೆ ಪ್ರಭಾವ ಬೀರಿದ ಆರೋಪ ಎದುರಿಸುತ್ತಿದ್ದಾರೆ.ಮ್ಯಾಚ್ ಫಿಕ್ಸಿಂಗ್ ಅನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ 2019 ರ ಕಾನೂನಿನ ಅಡಿಯಲ್ಲಿ ವಿಚಾರಣೆಗೆ ಒಳಗಾದ ಮೊದಲ ಆಟಗಾರ ಸೇನಾನಾಯಕೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪರಾಧ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ, 100 ಮಿಲಿಯನ್ ರೂಪಾಯಿ (309,000 ಡಾಲರ್) ದಂಡ ಅಥವಾ ಎರಡನ್ನೂ ವಿಧಿಸಬಹುದು.