ಬೆಂಗಳೂರು: ರಾಜ್ಯದೆಲ್ಲೆಡೆ ಮುಡಾ ಪ್ರಕರಣ ಸದ್ದು ಮಾಡುತ್ತಿರುವ ಹೊತ್ತಲ್ಲೇ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವರದಿ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾತಿಗಣತಿ ಬಹಿರಂಗಪಡಿಸುವಂತೆ ಸಚಿವರು, ಶಾಸಕರು ಒತ್ತಡ ಹೇರಲು ಮುಂದಾಗಿದ್ದಾರೆ.
ಜಾತಿಗಣತಿ ವರದಿಯನ್ನು ಸಂಪುಟ ಸಭೆಯಲ್ಲಿಟ್ಟು ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇತ್ತೀಚೆಗೆ ಹೇಳಿದ್ದರು.
ಗುರುವಾರ ಜಾತಿ ಗಣತಿ ವರದಿ ಜಾರಿ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಸಚಿವರು, ಶಾಸಕರು ಸಭೆ ಸೇರಿ ಚರ್ಚೆ ನಡೆಸಲಾಗಿದೆ. ಅಕ್ಟೋಬರ್ 7ರಂದು ಮಧ್ಯಾಹ್ನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಾತಿಗಣತಿ ವರದಿ ಜಾರಿಗೊಳಿಸುವಂತೆ ಒತ್ತಡ ಹಾಕಲು ತೀರ್ಮಾನಿಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ನಡೆದ ಸಮೀಕ್ಷೆ, ಜಯಪ್ರಕಾಶ್ ಹೆಗಡೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಲ್ಲಿಕೆಯಾದ ಸಮೀಕ್ಷೆಯ ವರದಿಯನ್ನು ಅಂಗೀಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಒತ್ತಡ ಹೇರಲಾಗುವುದು.
“ಮುಡಾ ಪ್ರಕರಣಕ್ಕೂ ಹಿಂದುಳಿದ ವರ್ಗದ ನಾಯಕರ ಸಭೆಗೂ ಯಾವುದೇ ಸಂಬಂಧವಿಲ್ಲ. ಜಾತಿಗಣತಿ ವರದಿ ಅಂಗೀಕರಿಸಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅಕ್ಟೋಬರ್ 7ರಂದು ಮುಖ್ಯಮಂತ್ರಿಗಳ ಭೇಟಿ ಮಾಡಿ ಜಾತಿ ಗಣತಿ ವರದಿ ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು” ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ತಿಳಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಹಿಂದುಳಿದ ವರ್ಗದ ಶಾಸಕರೆಲ್ಲರೂ ಸೇರಿ ಸಿಎಂ ಭೇಟಿ ಮಾಡಿ ಜಾತಿಗಣತಿ ವರದಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಸಚಿವರಾದ ಸಂತೋಷ್ ಲಾಡ್, ಬೈರತಿ ಸುರೇಶ್, ಮಾಜಿ ಸಚಿವರಾದ ಉಮಾಶ್ರೀ ಸೇರಿದಂತೆ ಹಲವರು ಭಾಗವಹಿಸಿದ್ದರು.