
ಭಾರತೀಯ ಅರಣ್ಯ ಸೇವೆಗಳ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಆಗಾಗ್ಗೆ ಸಸ್ಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
ಅವರ ಟ್ವಿಟರ್‌ನಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಈ ಬಾರಿ ಅವರು ಪಕ್ಷಿಗಳ ಪ್ರಪಂಚದ ಅದ್ಭುತವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದು ಭಾರತ ಮತ್ತು ನೆರೆಯ ದೇಶಗಳಲ್ಲಿ ಕಂಡುಬರುವ ಅನೇಕ ಜಾತಿಯ ಮರಕುಟಿಗಗಳಲ್ಲಿ ಒಂದಾದ ಲೆಸ್ಸರ್ ಯೆಲ್ಲೋನೇಪ್ನ.
ಪ್ರಾಣಿ ಪಕ್ಷಿಗಳ ಜೀವನವೇ ವಿಚಿತ್ರ ಹಾಗೂ ಕುತೂಹಲ. ಅವುಗಳ ಬಗ್ಗೆ ತಿಳಿದುಕೊಂಡಷ್ಟೂ ಕಡಿಮೆಯೇ. ಹಲವು ಬಗೆಯ ಪ್ರಾಣಿ, ಪಕ್ಷಿ, ಕೀಟಗಳ ರಚನೆಯಂತೂ ಅದ್ಹೇಗೆ ಸೃಷ್ಟಿಯಾಗಿದೆಯೋ ಎನ್ನುವಂಥ ವಿಸ್ಮಯ ಮೂಡಿಸುತ್ತದೆ. ಅವುಗಳ ಸಾಲಿಗೆ ಸೇರಿರುವುದು ಈ ಲೆಸ್ಸರ್ ಯೆಲ್ಲೋನೇಪ್ನ.
ನೋಡಲು ಥೇಟ್ ಎಲೆಯಂತೆಯೇ ಕಾಣುವ ಈ ಪಕ್ಷಿ ಮರದಲ್ಲಿ ಕುಳಿತುಕೊಂಡಿರುವುದು ಕ್ಷಣಕ್ಕೆ ಕಾಣಿಸುವುದೇ ಇಲ್ಲ. ಝೂಮ್ ಮಾಡಿ ನೋಡಿದರೆ ಮಾತ್ರ ಅದರ ಇರುವಿಗೆ ತಿಳಿಯುತ್ತದೆ. ಇಲ್ಲದಿದ್ದರೆ ಇದು ಹಸಿರು ಎಲೆಯಂತೆ ತೋರುತ್ತದೆ. ಈ ಪಕ್ಷಿಯ ಸೌಂದರ್ಯದ ಕುರಿತು ಪರ್ವೀನ್ ಕಸ್ವಾನ್ ಉಲ್ಲೇಖಿಸಿದ್ದಾರೆ. ಈ ಪಕ್ಷಿಯ ಸೌಂದರ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.