ಈ ಹಿಂದೆ ಐರ್ಲೆಂಡ್, ಫ್ರಾನ್ಸ್, ಸ್ಪೇನ್ ಮತ್ತು ಯುಕೆಯಲ್ಲಿ ಕಾಣಿಸಿಕೊಂಡಿದ್ದ ವಾಲ್ರಸ್ ಎಂಬ ಸಸ್ತನಿಯು ಐಸ್‌ಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿತ್ತು ಎಂದು ಸಮುದ್ರ ತಜ್ಞರು ಹೇಳಿದ್ದರು. ಬಳಿಕ ನಾಪತ್ತೆಯಾಗಿದ್ದ ದೈತ್ಯ ವಾಲ್ರಸ್ ಇದೀಗ ನಾರ್ತಂಬರ್‌ಲ್ಯಾಂಡ್‍ನಲ್ಲಿ ಪತ್ತೆಯಾಗಿದೆ. ಇದು ಬಂಡೆಯಂತೆ ಕುಳಿತಿರುವ ಫೋಟೋ ವೈರಲ್ ಆಗಿದೆ.
ವಾಲಿ ಎಂಬ ಹೆಸರಿನ ವಾಲ್ರಸ್ ಕೆಲವು ತಿಂಗಳ ಹಿಂದೆ ವೈರಲ್ ಆಗಿತ್ತು. 800 ಕೆ.ಜಿ. ತೂಕ ಹೊಂದಿರುವ ಆರ್ಕ್ಟಿಕ್ ವಾಲ್ರಸ್ ಮೂರು ವಾರಗಳಿಗಿಂತ ಹೆಚ್ಚು ಕಾಲ ಕಂಡುಬಂದಿಲ್ಲ. ಆದಾಗ್ಯೂ, ಸೀಲ್ ರೆಸ್ಕ್ಯೂ ಐರ್ಲೆಂಡ್ ತಂಡ, 22 ದಿನಗಳ ನಂತರ ವಾಲಿ ಮತ್ತೆ ಐಸ್‌ಲ್ಯಾಂಡ್‌ನಲ್ಲಿ ಪತ್ತೆಯಾಗಿರುವುದಾಗಿ ಹೇಳಿದ್ದರು.
ಅಲೆಮಾರಿ ವಾಲ್ರಸ್ ಐರ್ಲೆಂಡ್‌ಗೆ ತಲುಪುವ ಮೊದಲು 4,000 ಕಿಮೀ (2,485 ಮೈಲುಗಳು) ಪ್ರಯಾಣಿಸಿದೆ ಎಂದು ಭಾವಿಸಲಾಗಿದೆ. ಬ್ರಿಟೀಷ್ ಡೈವರ್ಸ್ ಮೆರೈನ್ ಲೈಫ್ ಪಾರುಗಾಣಿಕಾದಲ್ಲಿ ಫೋಟೋಗಳನ್ನು ನೀಡಿ ಮತ್ತು ಹೋಲಿಕೆ ಮಾಡಿದ ನಂತರ ವಾಲಿಯನ್ನು ಗುರುತಿಸಲಾಗಿದೆ ಎಂದು ಸೀಲ್ ರೆಸ್ಕ್ಯೂ ಐರ್ಲೆಂಡ್ ಹೇಳಿದೆ.
ವಾಲ್ರಸ್ ಗೆ ಸುಮಾರು ನಾಲ್ಕು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ವಾಲಿಯು ಭೂಮಿ ಅಥವಾ ಸಣ್ಣ ಹಡಗುಗಳಲ್ಲಿ ವಿಶ್ರಾಂತಿ ಪಡೆಯುವ ಪ್ರವೃತ್ತಿಯನ್ನು ಹೊಂದಿದೆ. ಈ ಕಾರಣದಿಂದಾಗಿ, ಯುಕೆ ಯಲ್ಲಿನ ಬ್ರಿಟಿಷ್ ಡೈವರ್ಸ್ ಮೆರೈನ್ ಲೈಫ್ ಪಾರುಗಾಣಿಕಾ ಸಂಸ್ಥೆಯು, ಜುಲೈನಲ್ಲಿ ಐಲ್ಸ್ ಆಫ್ ಸ್ಕಿಲ್ಲಿಯಲ್ಲಿ ವಾಲ್ರಸ್‌ಗಾಗಿ ತೇಲುವ ಪೊಂಟೂನ್ ಅನ್ನು ನಿರ್ಮಿಸಿತ್ತು.
ಕೆಲ ದಿನಗಳು ಇಲ್ಲಿ ತಂಗಿದ್ದ ಈ ಸಸ್ತನಿ ಬಳಿಕ ನಾಪತ್ತೆಯಾಗಿತ್ತು. ಈ ಪ್ರದೇಶದಲ್ಲಿ ವಾಲಿ ಮತ್ತೆ ಕಾಣಿಸಿಕೊಂಡರೆ ತೇಲುವ ಪೊಂಟೂನ್ ಅನ್ನು ಬಂದರಿನಲ್ಲಿ ಇರಿಸಲಾಗುವುದು ಎಂದು ಹೇಳಲಾಗಿದೆ.
ಆದರೆ, ನಾರ್ತಂಬರ್‌ಲ್ಯಾಂಡ್ ಕರಾವಳಿಯಲ್ಲಿರುವ ದೈತ್ಯ ವಾಲ್ರಸ್‌ನ ಹೊಸ ಫೋಟೋ ನೋಡಿದ ತಜ್ಞರಿಗೆ ವಾಲಿ ಮತ್ತೆ ಹಿಂತಿರುಗಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ. ಬಂಡೆಗಳ ಮೇಲೆ ವಾಲ್ರಸ್ ಕುಳಿತಿರುವ ಫೋಟೋ ವೈರಲ್ ಆಗಿದೆ. ಸಸ್ತನಿಗಳು ಸಾಮಾನ್ಯವಾಗಿ ಆರ್ಕ್ಟಿಕ್ ಸಮುದ್ರದ ಕಡೆಗೆ ವಾಸಿಸುವುದರಿಂದ ತೀರಕ್ಕೆ ಹೇಗೆ ಬಂದಿತು ಎಂಬ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿವೆ.