ನ್ಯೂಯಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಮಿಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯಲ್ಲಿ ಹೊಡೆದಾಟ ನಡೆದ ಘಟನೆ ನಡೆದಿದೆ. ನ್ಯೂಯಾರ್ಕ್ನಲ್ಲಿ ಶುಕ್ರವಾರದಂದು ಮೊದಲ ಬಾರಿ ಈ ಸೌಂದರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಆನಂತರ ಏರ್ಪಡಿಸಿದ್ದ ಸಂತೋಷಕೂಟವು ಹೀಗೆ ಹಿಂಸಾತ್ಮಕ ರೂಪಕ್ಕೆ ತಿರುಗಿತು.
ಈ ಸಂಘರ್ಷಕ್ಕೆ ಕಾರಣವೇನು ಎನ್ನುವುದು ಈತನಕ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಈ ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಯು ವಿಚ್ಛೇದಿತೆಯಾದ ಕಾರಣ ಆಕೆಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂಬ ಒತ್ತಾಯವನ್ನು ಪ್ರತಿಸ್ಪರ್ಧಿಯೊಬ್ಬರು ಹೇರತೊಡಗಿದರು. ಈ ಸಂದರ್ಭದಲ್ಲಿಯೇ ಗೆದ್ದ ಅಭ್ಯರ್ಥಿಯ ಕಿರೀಟವನ್ನು ಆಕೆ ಎಳೆದಾಡಿದರು. ಆಗಲೇ ಈ ಜಗಳಕ್ಕೆ ಕಿಡಿಹೊತ್ತಿಕೊಂಡಿದ್ದು ಎಂದು ಹೇಳಲಾಗುತ್ತಿದೆ.
ಈ ಹೊಡೆದಾಟದಲ್ಲಿ ಕೆಲ ವಸ್ತುಗಳು ಜಖಂಗೊಂಡಿವೆ. ಕೆಲವರನ್ನು ಬಂಧಿಸಲಾಗಿದೆ. ಒಟ್ಟು 14 ಜನ ಸ್ಪರ್ಧಿಗಳಿದ್ದು ಈ ಹೊಡೆದಾಟದಲ್ಲಿ ಅವರು ಭಾಗಿಯಾಗಿಲ್ಲ ಎನ್ನಲಾಗಿದೆ. ಇದರ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ತಲೆನೋವಾಗಿದೆ. ಶ್ರೀಲಂಕಾದ ಘನತೆಗೆ ಘಟನೆ ಕಳಂಕ ತಂದಿದೆ ಎಂದು ಮುಖಂಡರು ಹೇಳುತ್ತಾರೆ.
ಶ್ರೀಲಂಕಾದಿಂದ ಸಾಕಷ್ಟು ಜನರು ಅಮೆರಿಕಕ್ಕೆ ವಲಸೆ ಬಂದಿದ್ದಾರೆ. ತಮ್ಮ ದೇಶ ಸಂಕಷ್ಟದಲ್ಲಿರುವ ಕಾರಣ ಏನಾದರೂ ಸಹಾಯ ಮಾಡಬೇಕೆಂಬ ಇರಾದೆ ಈ ವಲಸಿಗರದ್ದು. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಹೀಗಾಗುತ್ತದೆ ಎಂಬ ಊಹೆ ಯಾರಿಗೂ ಇರಲಿಲ್ಲ ಎಂದು ಸ್ಪರ್ಧೆಯ ಆಯೋಜಕರಲ್ಲಿ ಒಬ್ಬರಾದ ಸುಜಾನಿ ಫೆರ್ನಾಂಡೋ ನ್ಯೂಯಾರ್ಕ್ ಪೋಸ್ಟ್ಗೆ ತಿಳಿಸಿದ್ದಾರೆ.