ಬೆಂಗಳೂರು: ಆಘಾತಕಾರಿ ಘಟನೆಯಲ್ಲಿ ಮಗನನ್ನು ಶಾಲೆಗೆ ಬಿಡಲು ಬಂದಿದ್ದ ತಾಯಿಯಿಂದಲೇ ಮುಖ್ಯಶಿಕ್ಷಕ ಮಸಾಜ್ ಮಾಡಿಸಿಕೊಂಡ ಆರೋಪ ಕೇಳಿ ಬಂದಿದ್ದು, ಆತನನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ಕೋದಂಡರಾಮಪುರದ ಬಿಬಿಎಂಪಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಸಾಜ್ ಮಾಡಿಸಿಕೊಂಡ ಆರೋಪ ಕೇಳಿಬಂದಿದೆ.
ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯೊಬ್ಬರು ತಮ್ಮ ಮಗನನ್ನು ಶಾಲೆಗೆ ಬಿಡಲು ಬಂದಿದ್ದಾರೆ. ಮಹಿಳೆಯ ಬಳಿ ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದ ಪ್ರಭಾರ ಮುಖ್ಯ ಶಿಕ್ಷಕ, ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಬಾಲಕನ ತಾಯಿ ಹೇಳಿದಾಗ, ತನಗೂ ಮಸಾಜ್ ಮಾಡುವಂತೆ ಬಲವಂತ ಮಾಡಿದ್ದಾನೆ.
ಮಗನ ಓದಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಹಿಳೆ ಇಷ್ಟವಿಲ್ಲದಿದ್ದರೂ ಮಸಾಜ್ ಮಾಡಲು ಒಪ್ಪಿಕೊಂಡಿದ್ದಾರೆ. ಶಾಲೆಯ ಕೊಠಡಿಯೊಂದಕ್ಕೆ ಮಹಿಳೆಯನ್ನು ಕರೆದುಕೊಂಡು ಹೋದ ಪ್ರಭಾರ ಮುಖ್ಯ ಶಿಕ್ಷಕ ಮಸಾಜ್ ಮಾಡಿಸಿಕೊಂಡು ಅಶ್ಲೀಲವಾಗಿ ಮಾತನಾಡಿದ್ದಾನೆ. ಈ ದೃಶ್ಯವನ್ನು ಶಾಲೆಯ ಶಿಕ್ಷಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ನಂತರ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳ ಗಮನಕ್ಕೂ ಬಂದಿದೆ.
ಸರ್ಕಾರಿ ಶಾಲೆಯಲ್ಲಿ ಕೆಲಸದ ವೇಳೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಪ್ರಭಾರ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.